ಕಲಾವಿದರೇ ಸಂಪತ್ತು, ಕಾಪಾಡುವುದು‌ ಅವಶ್ಯಕ- ಬಸವಪ್ರಭು ಸ್ವಾಮೀಜಿ ಹೇಳಿಕೆ

dvg-nataka-mar-10-1.jpg
Published on
ದಾವಣಗೆರೆ:ಗಗನಚುಂಬಿ ಕಟ್ಟಡಗಳು ದೇಶದ ಆಸ್ತಿಯಲ್ಲ, ಕಲಾವಿದರೇ ದೊಡ್ಡ ಸಂಪತ್ತು. ಅವರನ್ನು ಉಳಿಸಿದರೆ ವಿವಿಧ ಕಲೆಗಳು ಬದುಕಲಿವೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಶಿವಯೋಗಾಶ್ರಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 27ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ನಾಟಕ ಕಲೆಯಿಂದಲೇ ಹೆಸರಾದ ಡಾ. ರಾಜ್‌ಕುಮಾರ್, 40 ಭಾಷೆಗಳಲ್ಲಿ ಸಹಸ್ರ ಹಾಡುಗಳನ್ನು ಹಾಡಿದ ಎಸ್.ಬಿ. ಬಾಲಸುಬ್ರಹ್ಮಣ್ಯಂ ಅವರಂಥ ಕಲಾವಿದರನ್ನು ಮರು ಸೃಷ್ಟಿಸಲು ಸಾಧ್ಯವಿಲ್ಲ ಎಂದರು. ಟಿವಿ, ಮೊಬೈಲ್ ಬಂದ ನಂತರದಲ್ಲಿ ರಂಗಭೂಮಿ ಕಲೆಗೆ ಹಿನ್ನಡೆಯಾಗಿದೆ. 20 ವರ್ಷದ ಹಿಂದಿನ ರಂಗ ವೈಭವ ಈಗ ಉಳಿದಿಲ್ಲ. ದಕ್ಷಿಣ ಕರ್ನಾಟಕದಲ್ಲಿ ರಂಗ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಈ ಕಲೆಯನ್ನು ಉಳಿಸುವ ಜವಾಬ್ದಾರಿ ಎಲ್ಲ ಮಠಗಳು, ನಾಗರಿಕರು ಹಾಗೂ ಸಂಘ ಸಂಸ್ಥೆಗಳದ್ದಾಗಿದೆ ಎಂದು ಹೇಳಿದರು. ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ.ಭದ್ರಪ್ಪ ಭದ್ರಣ್ಣನವರ್ ಮಾತನಾಡಿ ನಾಟಕಗಳ ಪ್ರದರ್ಶನದೊಂದಿಗೆ ರಂಗಭೂಮಿ ಕಲಾವಿದರಿಗಾಗಿ ಕೆಲಸ ಮಾಡುತ್ತಿರುವ ನಮ್ಮ ಸಂಘಕ್ಕೆ ಅನುದಾನ ನೀಡದೆ ತಿರಸ್ಕರಿಸಲಾಗುತ್ತಿದೆ. ಯಾರದೋ ನಾಟಕ ಪ್ರದರ್ಶನಕ್ಕೆ ತಮ್ಮ ಸಂಘದ ಬೋರ್ಡ್ ಹಾಕಿಸಿ ಭಾವಚಿತ್ರ ತೋರಿಸಿದವರಿಗೆ ಮಾತ್ರ ಸಿಗುತ್ತಿದೆ ಎಂದು ವಿಷಾದಿಸಿದರು. ಹಿರಿಯ ಕಲಾವಿದ ಬಸವರಾಜ ಐರಣಿ ಮಾತನಾಡಿ ಆಧುನಿಕ ತಂತ್ರಜ್ಞಾನಗಳ ಪ್ರಭಾವ, ದೂರದರ್ಶನದ ಹಾವಳಿಯಿಂದಾಗಿ ರಂಗಭೂಮಿ ನಶಿಸುತ್ತಿದೆ ಎಂಬ ಆರೋಪವಿದೆ. ಆದರೆ ರಂಗಭೂಮಿ ಒಂದು ಗಂಡುಕಲೆ. ಇದು ಸ್ವಲ್ಪ ಮಟ್ಟಿಗೆ ಸೊರಗಿರಬಹುದು. ಆದರೆ ಯಾವ ಕಾರಣಕ್ಕೂ ನಶಿಸುವುದಿಲ್ಲ ಎಂದರು. ಕಲಾವಿದರ ಸಂಘದ ಗೌರವಾಧ್ಯಕ್ಷ ತಿಪ್ಪೇಶರಾವ್ ಚವ್ಹಾಣ್, ಕಾರ್ಯದರ್ಶಿ ಡಿ.ಮಹೇಶ್ವರಪ್ಪ ಇದ್ದರು. ಇದೇ ವೇಳೆ ‘ಧರ್ಮದೇವತೆ’,‘ಕಳ್ಳಗುರು ಸುಳ್ಳ ಶಿಷ್ಯ’ ಸಾಮಾಜಿಕ ನಾಟಕಗಳು ಪ್ರದರ್ಶಿತವಾದವು. ------
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net