

ಧಾರವಾಡ: ನಮ್ಮ ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿ ಇಟ್ಟುಕೊಂಡರೆ ಈಡಿಸ್ ಸೊಳ್ಳೆ ಕಡಿತದಿಂದ ಪಾರಾಗಿ ಡೆಂಘಿ ಮತ್ತು ಚಿಕೂನ್ ಗುನ್ಯಾ ರೋಗಗಳನ್ನು ಸುಲಭವಾಗಿ ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಲಾವಿದರಿಗೆ ಸನ್ಮಾನಿಸಿ ಮಾತನಾಡಿದ ಅವರು, ವಿವಿಧ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಿರುಚಿತ್ರ ನಿರ್ಮಿಸಿ ಜಾಗೃತಿ ಮೂಡಿಸುತ್ತಿರುವ ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಲಾವಿದರ ಕಾರ್ಯ ಶ್ಲಾಘನೀಯ ಎಂದರು.
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯಮನಪ್ಪ ಜಾಲಗಾರ, ಕಲಾವಿದರಾದ ವೈ.ಬಿ. ಕಾಳೆ, ನೇತ್ರ ಮಡ್ಲಿ, ಹನುಮಂತ, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಬಿ.ಆರ್.ಪಾತ್ರೋಟ, ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎನ್. ಅಗಡಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ಕೆ. ಚವ್ಹಾಣ, ಇತರರು ಇದ್ದರು.