ಕಲಾವಿದರಿಗೆ ಪ್ರೋತ್ಸಾಹಿಸುವ ಕೆಲಸವಾಗಲಿ

12 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಿರಂತರ ಜಾನಪದ ಕಲಾ ಸೇವೆ ನಡೆಸುವ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅನುದಾನ ನೀಡಬೇಕು. ಇದರಿಂದ ಕಲೆ ಉಳಿಸಿ, ಬೆಳೆಸಲು ಅನುಕೂಲವಾಗಲಿದೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.
ನಗರದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗದಲ್ಲಿ ಓಂಕಾರ ಸ್ಫೂರ್ತಿ ನೃತ್ಯ ಹಾಗೂ ಸಾಂಸ್ಕೃತಿಕ ಕೇಂದ್ರ ಸೋಮವಾರ ಏರ್ಪಡಿಸಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೃಷ್ಣಾ ಕೊಳ್ಳಾನಟ್ಟಿ ಮಾತನಾಡಿ, ಜಾನಪದ ಕಲಾ ಪ್ರಕಾರಗಳ ಜತೆಗೆ ಕಲಾವಿದರೂ ಜಿಲ್ಲೆ, ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಕಲಾವಿದರಿಗೆ ಸ್ಥಳೀಯ ಸಂಸ್ಥೆಗಳು ಸೇರಿ ಇತರರು ಸೂಕ್ತ ವೇದಿಕೆ ಕಲ್ಪಿಸಿ ಅವರ ಪ್ರತಿಭೆಗೆ ಅವಕಾಶ ನೀಡಬೇಕು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಹಾಗೂ ಕಲಾವಿದರಿಗೆ ಕಲಾಶ್ರೀ ಪ್ರಶಸ್ತಿ ನೀಡಲಾಯಿತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾ ತಂಡಗಳಿಂದ ಡೊಳ್ಳು ಕುಣಿತ, ಜಗ್ಗಲಿಗೆ, ಸೋಬಾನ ಪದ, ಗೀಗೀ ಪದ, ಭರತನಾಟ್ಯ ಸೇರಿ ವಿವಿಧ ಕಲಾ ಪ್ರಕಾರಗಳನ್ನು ಪ್ರಸ್ತುತಪಡಿಸಲಾಯಿತು.
ಹಿರಿಯ ವಕೀಲ ಪಿ.ಎಚ್. ನೀರಲಕೇರಿ, ಕಲಾವಿದ ಎನ್.ಎ. ದೇಸಾಯಿ, ಯಕ್ಕೇರಪ್ಪ ನಡುವಿನಮನಿ, ಶಿವಾನಂದ ಅಮರಶೆಟ್ಟಿ, ಸತೀಶ ತುರಮರಿ, ವಿದುಷಿ ಪ್ರಮೋದಾ ಉಪಾಧ್ಯಾಯ, ಮಾರುತಿ ಮಕಾಡವಾಲೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net