ಕಲಾವಿದರಿಂದ ಅಸ್ತಿತ್ವದಲ್ಲಿದೆ ಜಾನಪದ

TKE janapada
ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಉದ್ಘಾಟಿಸಿದರು. ಮುಗುಳಿ ಲಕ್ಷ್ಮೀದೇವಮ್ಮ, ಡಾ. ಮಾಳೇನಹಳ್ಳಿ ಬಸಪ್ಪ, ಡಾ. ಬಸವರಾಜ ನೆಲ್ಲಿಸರ, ಗೊಲ್ಲಹಳ್ಳಿ ಶಿವಪ್ರಸಾದ್, ಎ.ಸಿ.ಚಂದ್ರಪ್ಪ ಇತರರಿದ್ದರು.
Published on

ತರೀಕೆರೆ: ಅಜ್ಜಂಪುರ ಭಾಗದಲ್ಲಿ ಬಹುಸಂಖ್ಯೆಯಲ್ಲಿರುವ ಕಲಾವಿದರ ಕಾರ್ಯಚಟುವಟಿಕೆಯಿಂದ ಜಾನಪದ ಜೀವಂತವಾಗಿ ಉಳಿಯಲು ಸಾಧ್ಯವಾಗಿದೆ ಎಂದು ಜಾನಪದ ಸಾಹಿತಿ ಡಾ. ಬಸವರಾಜ ನೆಲ್ಲಿಸರ ಹೇಳಿದರು.

ವಿಶ್ವ ಜಾನಪದ ದಿನಾಚರಣೆ ಹಿನ್ನೆಲೆಯಲ್ಲಿ ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬ್ರಿಟನ್‌ನ ವಿದ್ವಾಂಸರೊಬ್ಬರು 1846ರಲ್ಲಿ ಹುಟ್ಟುಹಾಕಿದ ಜಾನಪದವನ್ನು ಕನ್ನಡ ಸಾಹಿತಿ ಹಾ.ಮಾ.ನಾಯಕ ಪ್ರಚುರಪಡಿಸಿ ನಾಡಿನೆಲ್ಲೆಡೆ ವಿಸ್ತರಿಸುವ ಕೆಲಸ ಮಾಡಿದ್ದಾರೆ. ಜಾನಪದ ಸಂಕೀರ್ಣ ಸನ್ನಿವೇಶ ಎದುರಿಸುತ್ತಿದ್ದು ಸಭೆ, ಸಮಾರಂಭ, ಮೆರವಣಿಗೆಗೆ ಸೀಮಿತಗೊಳ್ಳುವಂತಾಗಿದೆ. ಕಲೆ ಜೀವಂತಗೊಳಿಸಲು ಜಾನಪದ ಅಕಾಡೆಮಿ ಜತೆ ಸರ್ಕಾರ ಹೆಚ್ಚಿನ ಆಸಕ್ತಿವಹಿಸಿ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.

ದೇಶದ ಸ್ವಾತಂತ್ರೃ ಹೋರಾಟದಲ್ಲಿ ಸೋಬಾನೆ, ಲಾವಣಿ, ಜಾನಪದ ನುಡಿಗಟ್ಟುಗಳು ಸೇರಿ ಇತರ ಪ್ರಕಾರದ ಗ್ರಾಮೀಣ ಸೊಗಡಿನ ಹಾಡುಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ. ಇವು ಹೋರಾಟದ ಮೇಲೂ ಪ್ರಭಾವ ಬೀರಿದ್ದವು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಮಾತನಾಡಿ, ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕಿನಲ್ಲಿ 142 ಜಾನಪದ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದ್ದು, ಇದೀಗ ಮಾಸಾಶನ ಪಡೆಯಲು ಇಚ್ಛಿಸುವವರು ಜಾನಪದ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷ ಸೇವೆ ಸಲ್ಲಿಸಿರಬೇಕು. ಅಗತ್ಯ ದಾಖಲೆಗಳನ್ನು ಇಲಾಖೆಗೆ ನೀಡಬೇಕು ಎಂದು ಮಾಹಿತಿ ನೀಡಿದರು.

ಕಂಸಾಳೆ, ಚಿಟ್ಟಿಮೇಳ, ವೀರಗಾಸೆ, ಚೌಡಿಕೆ ಮೇಳ, ಸೋಬಾನೆ ಮತ್ತು ಜಾನಪದ ಹಾಡುಗಾರರು, ಜಾನಪದ ಕಲಾವಿದರು ಪಟ್ಟಣದಲ್ಲಿ ನಡೆದ ಮೆರವಣಿಗೆಗೆ ಮೆರುಗು ನೀಡಿದರು.

ಕೇಂದ್ರ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮೀದೇವಮ್ಮ, ಜಾನಪದ ಪ್ರಶಸ್ತಿ ಪುರಸ್ಕೃತ ಡಾ. ಮಾಳೇನಹಳ್ಳಿ ಬಸಪ್ಪ, ತಹಸೀಲ್ದಾರ್ ವಿನಾಯಕ ಸಾಗರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಕೆ.ಆರ್.ರಾಜಣ್ಣ, ರಂಗ ಸಂಘಟಕ ಎ.ಸಿ.ಚಂದ್ರಪ್ಪ, ಜಾನಪದ ಅಕಾಡೆಮಿ ಮಾಜಿ ಸದಸ್ಯ ಡೊಳ್ಳು ರಂಗಸ್ವಾಮಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net