ಕಲಾವಿದರಲ್ಲಿ ಇರುತ್ತದೆ ಆತ್ಮಸ್ಥೈರ್ಯ

ramalu gadgi
Published on

ಬೀದರ್: ಅನ್ನವು ಮನುಷ್ಯರ ದೇಹಕ್ಕೆ ಆಹಾರ ಒದಗಿಸಿದರೆ ಸಂಗೀತವು ಮೆದುಳಿಗೆ ಆಹಾರ ಒದಗಿಸಿ ಆತ್ಮಸ್ಥೈರ್ಯ ತುಂಬುತ್ತದೆ. ಹೀಗಾಗಿ ಅದೆಷ್ಟೇ ಸಮಸ್ಯೆ, ಸವಾಲು ಬಂದರೂ ಸಂಗೀತ ಕಲಾವಿದರು ಆತ್ಮಹತ್ಯೆಗೆ ಶರಣಾಗಿಲ್ಲ ಎಂದು ಹಿರಿಯ ಸಂಗೀತ ಕಲಾವಿದ ರಾಮುಲು ಗಾದಗಿ ಹೇಳಿದರು.

ಕಸಾಪ ಜಿಲ್ಲಾ ಮತ್ತು ತಾಲೂಕು ಘಟಕದಿಂದ ಶನಿವಾರ ಸಂಜೆ ನಗರದ ಕೆ ಎಚ್ ಬಿ ಕಾಲನಿಯಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತು, ಸಂವಾದದಲ್ಲಿ ಮಾತನಾಡಿ, ಸಂಗೀತ ಒಂದು ತಪಸ್ಸಾಗಿದೆ. ಇದು ಸಾಧಕರಿಗೆ ಮಾತ್ರ ಒಲಿಯುತ್ತದೆ. ಸಂಗೀತದಲ್ಲಿ ಗುರು ಶಿಷ್ಯ ಸಂಬಂಧ ಅನನ್ಯವಿದೆ. ಸಂಗೀತ ಕ್ಷೇತ್ರದಲ್ಲಿ ತಾಳ್ಮೆ, ಸಹನೆ, ಅರ್ಪಣಾ ಭಾವ ತುಂಬ ಅಗತ್ಯ ಎಂದರು.

ಪ್ರತಿಯೊಬ್ಬರೂ ನಿತ್ಯ ಸಂಗೀತ ಆಲಿಸುವುದನ್ನು ರೂಢಿಸಿಕೊಳ್ಳಬೇಕು. ನಾನು ವಿದ್ಯಾರ್ಥಿ ಜೀವನದಿಂದಲೇ ಸಂಗೀತದ ಅಭಿರುಚಿ ಬೆಳೆಸಿಕೊಂಡೆ. ಶಿಕ್ಷಕರು ಹಾಗೂ ಪಾಲಕರು ನನ್ನ ಸಂಗೀತಕ್ಕೆ ಪ್ರೇರಣೆ ನೀಡಿದು. ಪಂಡಿತ ಭೀಮಸೇನ ಜೋಶಿ ಸೇರಿ ಮೊದಲಾದ ಸಂಗೀತ ದಿಗ್ಗಜರ ಪ್ರಭಾವ ನನ್ನ ಮೇಲೆ ಬೀರಿದೆ ಎಂದರು.

ಸಂಗೀತ ಮತ್ತು ನೃತ್ಯ ಅಕಾಡೆಮಿ ಮಾಜಿ ಸದಸ್ಯ ರಾಜೇಂದ್ರಸಿಂಗ್ ಪವಾರ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಪರಿಷತ್ ಕಲಾವಿದರ ಮನೆಗೆ ಬರುತ್ತಿರುವುದು ಶ್ಲಾಘನೀಯ. ಇದೊಂದು ಉತ್ತಮ ಬೆಳವಣಿಗೆ. ಇದೇ ರೀತಿ ತಾಲೂಕು ಕೇಂದ್ರಗಳಲ್ಲಿ ಸಹ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಧ್ಯಕ್ಷ ಎಂ.ಎಸ್. ಮನೋಹರ ಮಾತನಾಡಿ, ಸಾಹಿತಿ, ಕಲಾವಿದರ ಜೀವನ ಸಾಧನೆ ಅವಲೋಕನ ಮಾಡುವ ಕಾರ್ಯಕ್ರಮ ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆಯೋಜಿಸಲಾಗುತ್ತಿದೆ. ಇದು ಸ್ಥಳೀಯ ಜತೆಗೆ ಭಾರತದಾಚೆಯ ಕನ್ನಡಿಗರೂ ವೀಕ್ಷಿಸುವಂತಾಗಿದೆ ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿದರು. ಟಿ.ಎಂ. ಮಚ್ಚೆ, ಬಾಪು ಮಡಕಿ, ಸುಬ್ಬಣ್ಣ ಕರಕನಳ್ಳಿ ಇತರರಿದ್ದರು. ಕಲಾವಿದ ನಾಗರಾಜ ಜೋಗಿ ಸ್ವಾಗತಿಸಿದರು. ವಿದ್ಯಾವತಿ ಹಿರೇಮಠ ನಿರೂಪಣೆ ಮಾಡಿದರು. ಡಾ. ಬಸವರಾಜ ಬಲ್ಲೂರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net