

ಕಂಪ್ಲಿ: ಗ್ರಾಮೀಣ ಪ್ರದೇಶದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೇರೇಪಿಸಲು ಪ್ರಗತಿಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಅಗತ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಹೇಳಿದರು.
ರಾಮಸಾಗರದ ಸಹಿಪ್ರಾಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿ ಹಿರಿಯ ಕಲಾವಿದರು, ಪ್ರಶಸ್ತಿ ಪುರಸ್ಕೃತರು, ಆಕಾಶವಾಣಿ ಕಲಾವಿದರನ್ನು ಪ್ರೋತ್ಸಾಹಿಸಲು ಜಿಲ್ಲಾಮಟ್ಟದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ರಂಗಭೂಮಿ ಕಲಾವಿದೆ ವೀಣಾಕುಮಾರಿ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರ ನಡೆಯಬೇಕಿದೆ ಎಂದರು.
ಬಳ್ಳಾರಿಯ ಮೋಹನ್ ಕಲಬುರಗಿ ಅವರಿಂದ ವಾಯಲಿನ್ ವಾದನ, ಕೆ.ದೊಡ್ಡಬಸಪ್ಪ ಗವಾಯಿಯಿಂದ ಸುಗಮ ಸಂಗೀತ, ವನಮಾಲ ಕುಲಕರ್ಣಿ ತಂಡದಿಂದ ಸಮೂಹ ನೃತ್ಯ, ಯಲ್ಲನಗೌಡ ಶಂಕರಬಂಡೆಯಿಂದ ಜಾನಪದ ಗೀತೆ, ಏಳುಬೆಂಚಿಯ ಸಿ.ಎಂ.ಕರುಣಾಮೂರ್ತಿಯಿಂದ ಕಥಾ ಕೀರ್ತನೆ, ಎ.ವರಲಕ್ಷ್ಮೀ ತಂಡದಿಂದ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಆಶಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಪಂ.ಉಪಾಧ್ಯಕ್ಷ ಆರ್.ಎಂ.ರಾಮಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಎಂ.ಪ್ರಶಾಂತ್, ನೃತ್ಯ ಕಲಾವಿದೆ ಗೀತಾ ಚಪ್ಪರ್, ಗ್ರಾಪಂ.ಸದಸ್ಯರು, ಪ್ರಮುಖರಿದ್ದರು.