ಕಲಾವಿದರ ತವರೂರು

Published on

ಬಳ್ಳಾರಿ : ಕಲಾವಿದರ ತವರೂರು ಎಂದೇ ಕರೆಯುವ ಬಳ್ಳಾರಿ ಜಿಲ್ಲೆ' ಕಲಾವಿದರನ್ನು ಹುಟ್ಟು ಹಾಕುವ ಪವಿತ್ರ ಜಿಲ್ಲೆಯಾಗಿದೆ‌ ಎಂದು ನಾಡೋಜ ಪುರಸ್ಕೃತ ಡಾ. ವಿ.ಟಿ.ಕಾಳೆ ಹೇಳಿದರು. ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದಿಂದ ಭಾನುವಾರ ನಡೆದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಲಾವಿದರನ್ನು ಹುಟ್ಟುಹಾಕುವ ಪವಿತ್ರ ಜಿಲ್ಲೆಯಾಗಿದೆ. 1956 ರಲ್ಲಿ ಹಾವೇರಿಯಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ನಾಟಕ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಕಂಪನಿಯಲ್ಲಿದ್ದ 60 ಜನರ ಪೈಕಿ ಸುಮಾರು 4೦ ಜನರು ಬಳ್ಳಾರಿಯವರು. ಹೀಗೆ ಬಳ್ಳಾರಿ ಜಿಲ್ಲೆಯ ಕಲಾವಿದರು, ರಾಜ್ಯ, ದೇಶ, ವಿದೇಶಗಳಲ್ಲೂ ಪಸರಿಸಿದ್ದು, ಬಳ್ಳಾರಿ ಕಲಾವಿದರನ್ನು ಹುಟ್ಟುಹಾಕುವ ಪವಿತ್ರ ಜಿಲ್ಲೆಯಾಗಿದೆ ಎಂದು ಸ್ಮರಿಸಿದರು. ಬಳ್ಳಾರಿಯ ತೊಗಲುಗೊಂಬೆ ಕಲೆ ದೇಶ, ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಕಲಾವಿದರಾದ ಬಳ್ಳಾರಿ ರಾಘವ, ಜೋಳದರಾಶಿ ದೊಡ್ಡನಗೌಡರು, ಕೋಲಾಚಲಂ, ಬಳ್ಳಾರಿ ಲಲಿತಮ್ಮ, ಅವರ ತಂಗಿ ರತ್ನಮ್ಮ, ಬೆಳಗಲ್ಲು ವೀರಣ್ಣ, ದುರ್ಗಾದಾಸ್ ಹೀಗೆ ಹಲವಾರು ಕಲಾವಿದರು ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೊಗಲುಗೊಂಬೆ ಕಲೆಗೆ 3೦೦ ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ಬರೆದಿದ್ದೇನೆ. ದೇಶ, ವಿದೇಶಗಳಲ್ಲೂ ಪ್ರದರ್ಶನ ಕಂಡಿದೆ ಎಂದು ಶ್ಲಾಘಿಸಿದರು. ಇದೇ ವೇಳೆ ಬಿಚಿಯವರಸರ್ಕಾರ ಎಂದರೆ ಕತ್ತೆಯಿದ್ದಂತೆ, ಅದನ್ನು ಒದ್ದು ಕೆಲಸ ಮಾಡಿಸಿಕೊಳ್ಳಬೇಕು' ಎಂಬ ಮಾತನ್ನು ಹೇಳಿದ ಕಾಳೆಯವರು, ಕಲಾವಿದರು ಒಗ್ಗಟ್ಟು ಆಗದಿದ್ದರೆ ಕಲಾವಿದರ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಕಲಾವಿದರು ಸೃಜನಶೀಲರಾಗಬೇಕು. ಕಲಾಕ್ಷೇತ್ರ ವಿಶಾಲವಾಗಿದೆ. ಕಲೆಯ ಸಾಮರ್ಥ್ಯ ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲವಾಗಿದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಆರ್.ಭೀಮಸೇನ್ ಮಾತನಾಡಿ, ಬಳ್ಳಾರಿ ರಾಘವ, ಜೋಳದ ರಾಶಿ ದೊಡ್ಡನಗೌಡ, ಬೆಳಗಲ್ಲು ವೀರಣ್ಣ, ಹೀಗೆ ಗುರುಪರಂಪರೆಯೇ ಇದೆ. ವಿದ್ಯೆ ಕಲಿಸದ ವಿದ್ಯೆಯನ್ನು ಕಲೆ ಕಲಿಸುತ್ತದೆ. ಗುರಿ ಗಮನ ಒಂದೆಡೆ ಇದ್ದಲ್ಲಿ ಗುರುಗಳ ಕೃಪೆ ಇದ್ದೇ ಇರುತ್ತದೆ ಎಂದು ತಿಳಿಸಿದರು.
ನಿವೃತ್ತ ಉಪನಿರ್ದೇಶಕ ಟಿ.ಕೊಟ್ರಪ್ಪ ಮಾತನಾಡಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಚಯ ಗಾಯನ, ಭಾವಗೀತೆ, ಜಾನಪದಗೀತೆ, ಮಹಿಳಾ ಕೋಲಾಟ, ಭರತ ನಾಟ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಹಗಲುವೇಷ, ಗೊರವರ ಕುಣಿತ, ಡೊಳ್ಳು ಕುಣಿತ, ಬಯಲಾಟ ರಂಗಗೀತೆ, ನಗೆಹಬ್ಬ-ಹಾಸ್ಯ ಸೇರಿ ಹಲವು ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಯಲಾಟ ಕಲಾವಿದೆ ಸುಜಾತಮ್ಮ, ರಂಗಭೂಮಿ ಕಲಾವಿದರಾದ ರಮೇಶಗೌಡ ಪಾಟೀಲ್, ವೀಣಾಕುಮಾರಿ ಆದೋನಿ, ವರಲಕ್ಷ್ಮೀ, ನೃತ್ಯ ಗುರುಗಳಾದ ಜಿಲಾನಿಬಾಷ, ತಬಲ ವಾದಕ ಎಚ್.ಪಾಂಡುರಂಗಪ್ಪ ಅವರನ್ನು‌ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net