

ಬಳ್ಳಾರಿ : ಜಿಲ್ಲೆಯ ಕಲಾವಿದರು ಸಾಂಸ್ಕ್ರತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ ಹೇಳಿದರು.
ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಟಿ.ಎಚ್.ಎಂ. ಸಾಂಸ್ಕ್ರತಿಕ ಕಲಾ ಟ್ರಸ್ಟ್ ಹಾಗೂ ಅಭಿನಯ ಕಲಾ ಕೇಂದ್ರ ಸಹಯೋಗದೊಂದಿಗೆ ನಡೆದ ಸಾಂಸ್ಕ್ರತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಂಗಮಂದಿರ ನವೀಕರಣಗೊಂಡ ಬಳಿಕ ಮೊದಲ ಕಾರ್ಯಕ್ರಮವಾಗಿದೆ. ಇದೇ ತರಹ ಇನ್ನುಳಿದ ಕಲಾವಿದರು ಮುಂದಿನ ದಿನಗಳಲ್ಲಿ ಈ ರಂಗ ಮಂದಿರದ ಸದುಪಯೋಗಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಇರುವಷ್ಟು ಕಲಾವಿದರು ಹಾಗೂ ಕಲಾ ಪ್ರಕಾರಗಳು ಯಾವ ಜಿಲ್ಲೆಯಲ್ಲಿಯೂ ಇಲ್ಲ ಎಂದರು. ಡೊಳ್ಳು ಕುಣಿತ , ರಂಗಗೀತೆಗಳು, ಬಯಲಾಟದ ಸುಗಮ ಸಂಗೀತ, ಸಮೂಹ ನೃತ್ಯ, ಭಾವಗೀತೆ ಹಾಗೂ ವಿಶ್ವಗುರು ಬಸವಣ್ಣನವರ ನಾಟಕದ ಪ್ರದರ್ಶನವು ಎಲ್ಲವೂ ಒಂದೇ ವೇದಿಕೆಯಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಟಿಎಚ್‌ಎಂ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಬಸವರಾಜ ಮಾತನಾಡಿ, ಪ್ರತಿ ವರ್ಷ ಒಬ್ಬ ಹಿರಿಯ ಕಲಾವಿದರಿಗೆ ನಮ್ಮ ಟ್ರಸ್ಟ್ ನಿಂದ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಬಳಿಕ ಟಿಎಚ್‌ಎಂ ಬಸವರಾಜ್ ತಂಡದ ಸಮಾಳ ಪ್ರದರ್ಶನ, ಬಸಾಪುರ ಚಂದ್ರಶೇಖರ ತಂಡದ ಡೊಳ್ಳು ಕುಣಿತ, ರಂಗ ಜಂಗಮ ಸಂಸ್ಥೆಯ ವಿಷ್ಣು ಹಡಪದ ಸಂಗಡಿಗರಿಂದ ರಂಗಗೀತೆಗಳು, ಮಾವಿನಹಳ್ಳಿಯ ಕುರುಬರ ಹೇಮೇಶ್ವರ ತಂಡದ ಬಯಲಾಟ, ಸಂಜೀವಯನಕೋಟೆಯ ಕೆ .ನಾಗರಾಜ್ ತಂಡದ ಸುಗಮ ಸಂಗೀತ, ಕೆ. ಸಿ. ಸುಂಕಣ್ಣ ತಂಡದ ಸಮೂಹ ನೃತ್ಯ, ರೇಣುಕಾ ಅಭಿಲಾಶ್ ತಂಡದ ಭಾವಗೀತೆ, ಅಭಿನಯ ಕಲಾ ಕೇಂದ್ರದಿಂದ ವಿಶ್ವಗುರು ಬಸವಣ್ಣನ ನಾಟಕ ಪ್ರದರ್ಶನ ನಡೆಯಿತು. ಕಲಾವಿದರನ್ನು ಗೌರವಿಸಲಾಯಿತು.