

ಧಾರವಾಡ: ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ನಿಷೇಧ ಹೇರಿದ ಬೆನ್ನಲ್ಲೇ ಕೆಲ ಕಲಾವಿದರು ತಮ್ಮ ಅತಂತ್ರ ಸ್ಥಿತಿ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ಮಾಹಿತಿ ತಿಳಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಅವರು ಕಲಾವಿದರ ಮನೆಗೆ ಭಾನುವಾರ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
ನಗರದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು, ತಾವು ಮಾಡಿದ ಗಣೇಶ ಮೂರ್ತಿಗಳ ಸಮೇತ ಕೆರೆ, ಬಾವಿ ನೋಡಿಕೊಳ್ಳುತ್ತೇವೆ ಎಂಬ ಅರ್ಥದಲ್ಲಿ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದರು. ಪ್ರಮೋದ ಮುತಾಲಿಕ ಅವರು ಭಾನುವಾರ ಮಂಜುನಾಥ ಹಿರೇಮಠರ ನಿವಾಸಕ್ಕೆ ತೆರಳಿ, ಸಮಾಧಾನದ ಮಾತು ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾವಿದರು ಬಂಡವಾಳ ಹಾಕಿ ಮೂರ್ತಿಗಳನ್ನು ಸಿದ್ಧ ಮಾಡಿದ್ದಾರೆ. ಆದರೆ, ಸರ್ಕಾರದ ನಿರ್ಧಾರದಿಂದಾಗಿ ಜನರು ಮೂರ್ತಿಗಳ ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಅನೇಕ ಕಲಾವಿದರ ಕುಟುಂಬಗಳು ಬೀದಿಗೆ ಬರುವಂತಾಗಿದೆ. ಸರ್ಕಾರಕ್ಕೆ ಬಡ ಕುಟುಂಬಗಳ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದೇಶ ಮರುಪರಿಶೀಲಿಸಿ, ಮುಂಜಾಗ್ರತೆ ಕ್ರಮಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಲು ಆಗ್ರಹಿಸಿ ಶ್ರೀರಾಮಸೇನೆ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮುತಾಲಿಕ ತಿಳಿಸಿದರು.