ಕಲಾವಿದ ನಾಗರಾಜಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ

26-gdg-11 nagaraj jakkammanavar
Published on

ಗದಗ: ತಾಲೂಕಿನ ನೀಲಗುಂದ ಗ್ರಾಮದ ಜೈಭೀಮ ಗೀಗೀ ಜನಪದ ಕಲಾ ತಂಡದ ಉಪಾಧ್ಯಕ್ಷ ಹಾಗೂ ಜಾನಪದ ಹಿರಿಯ ಕಲಾವಿದ ನಾಗರಾಜ ನೀಲಪ್ಪ ಜಕ್ಕಮ್ಮನವರ ಅವರು 2019ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಗರಾಜ ಜಕ್ಕಮ್ಮನವರ ಅವರು ಮೂರೂವರೆ ದಶಕಗಳಿಂದ ಜಾನಪದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1983ರಲ್ಲಿ ಏರ್ಪಡಿಸಿದ್ದ ಯುವಜನ ಮೇಳದಿಂದ ಇವರ ಕಲಾಸೇವೆ ಆರಂಭಗೊಂಡಿತು. ಗ್ರಾಮದಲ್ಲಿ ದುರ್ಗಾದೇವಿ ಭಜನಾ ಮಂಡಳ, ಡಾ. ಅಂಬೇಡ್ಕರ್ ಯುವಕ ಮಂಡಳ ಮೂಲಕ ಎರಡು ದಶಕಗಳ ಕಾಲ ಕಲಾ ಸೇವೆ ಮಾಡಿದ್ದಾರೆ. 2008ರಲ್ಲಿ ನಾಗರಾಜ ಜಕ್ಕಮ್ಮನವರ, ಬಸವರಾಜ ಜಕ್ಕಮ್ಮನವರ ಮತ್ತಿತರರು ಸೇರಿ ಜೈಭೀಮ ಗೀಗೀ ಜನಪದ ಕಲಾ ತಂಡ ಸ್ಥಾಪಿಸಿ ಸೇವೆ ಮುಂದುವರಿಸಿದ್ದಾರೆ. ನಾಗರಾಜ ಜಕ್ಕಮ್ಮನವರ ಕಲಾ ತಂಡದವರು ಸರ್ಕಾರಿ ಕಾರ್ಯಕ್ರಮಗಳು, ಉತ್ಸವಗಳು, ಇತರೆ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಪಾಂಡಿಚೇರಿ, ಆಂಧ್ರಪ್ರದೇಶದಲ್ಲಿ ಸಹ ಈ ತಂಡದವರು ಪ್ರದರ್ಶನ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net