ಕಲಾಮಂದಿರ ನಿರ್ಮಿಸಲು ಸರ್ಕಾರಿ ಸ್ಥಳ ಶೋಧ

20KMD-1
Published on

ಕೆ.ಎಂ.ದೊಡ್ಡಿ: ಚಿಕ್ಕರಸಿನಕೆರೆ ಹೋಬಳಿ ವ್ಯಾಪ್ತಿಯಲ್ಲಿ ಕಲೆಯ ಆರಾಧಕರು ಹೆಚ್ಚಿದ್ದು, ಈ ವ್ಯಾಪ್ತಿಯ ಕೇಂದ್ರ ಸ್ಥಾನವಾದ ಕೆ.ಎಂ.ದೊಡ್ಡಿಯಲ್ಲಿ ಕಲಾಮಂದಿರ ನಿರ್ಮಿಸಲು ಸರ್ಕಾರಿ ಸ್ಥಳವನ್ನು ಹುಡುಕಲಾಗುತ್ತಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್, ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವ್ಯಾಪ್ತಿಯಲ್ಲಿ ಹೆಚ್ಚಿನ ಕಲಾವಿದರಿದ್ದು, ಅವರ ಕಲೆಯನ್ನು ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಲಾಗಿದೆ. ರಂಗ ಮಂದಿರ ನಿರ್ಮಾಣ ಮಾಡುವ ಸಂಬಂಧ ಜಾಗ ಗುರುತಿಸಲು ಜಿಲ್ಲಾ ಹಾಗೂ ತಾಲೂಕು ಆಡಳಿತಕ್ಕೆ ತಿಳಿಸಿದ್ದು ಸರ್ಕಾರಿ ಜಾಗವನ್ನು ಸರ್ವೇ ಮಾಡಿಸಿ ಶೀಘ್ರದಲ್ಲೇ ರಂಗ ಮಂದಿರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಇಂದಿನ ಕಾಲದಲ್ಲಿ ಮೊಬೈಲ್, ಟಿವಿ ಗೀಳು ಹೆಚ್ಚಿದ್ದು, ರಂಗಭೂಮಿ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಐತಿಹಾಸಿಕ ಪೌರಾಣಿಕ ನಾಟಕಗಳಿಗೆ ಜೀವ ತುಂಬಿ ಅವುಗಳನ್ನು ಉಳಿಸಲು ಕಲಾವಿದರು ಶ್ರಮಿಸುತ್ತಿರುವುದು ಶ್ಲಾಘನೀಯ. ಬಹುತೇಕ ಕಲಾವಿದರೂ ರಂಗಭೂಮಿಯಿಂದ ಬಂದು ಸಿನಿಮಾಗಳಲ್ಲಿ ಉತ್ತಮ ಹೆಸರು ಮಾಡಿದ್ದಾರೆ. ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘ ಪ್ರತಿ ವರ್ಷ ಉತ್ತಮ ಕಲಾವಿದರನ್ನು ಗುರುತಿಸಿ ಬಂಗಾರದ ಕಡಗ ನೀಡುತ್ತಾ ಕಲಾವಿದರಿಗೆ ಆತ್ಮಸ್ಥೈರ್ಯ ತುಂಬುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಸಿ.ಎ.ಕೆರೆ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ತೊರೆಚಾಕನಹಳ್ಳಿ ಶಂಕರೇಗೌಡ, ತೈಲೂರು ಸಿದ್ದರಾಜು, ದೊಡ್ಡರಸಿನಕೆರೆ ಗಂಜೇಂದ್ರ, ಹಾಗಲಹಳ್ಳಿ ಬಸವರಾಜು. ಮಹೇಶ್, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಅಣ್ಣೂರು ಈಶಪ್ರಸಾದ್, ದೇವರಾಜು, ಬೀರೇಶ್, ಮುತ್ತುರಾಜ್, ಬಸವರಾಜು ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net