ಕಲಾ ರಂಗಕ್ಕೆ ಪಿ.ಆರ್.ತಿಪ್ಪೇಸ್ವಾಮಿ ಕೊಡುಗೆ ಅಪಾರ

mysore
Published on

ಮೈಸೂರು: ಚಿತ್ರಕಲಾವಿದ, ಜಾನಪದ ಜಂಗಮ, ಲೇಖಕ ಪಿ.ಆರ್.ತಿಪ್ಪೇಸ್ವಾಮಿ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಪಿ.ಆರ್.ತಿಪ್ಪೇಸ್ವಾಮಿ ಅಧ್ಯಯನ ಪೀಠದ ವತಿಯಿಂದ ಮಾನಸಗಂಗೋತ್ರಿಯಲ್ಲಿರುವ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದಿವಂಗತ ಪಿ.ಆರ್.ತಿಪ್ಪೇಸ್ವಾಮಿ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಿಪ್ಪೇಸ್ವಾಮಿ ಅವರು ಕಲಾವಿದ, ಜಾನಪದ ವಿದ್ವಾಂಸ, ಸಾಹಿತಿ ಹಾಗೂ ಸಮಾಜ ಸೇವಕರೂ ಆಗಿದ್ದರು. ವೈವಿಧ್ಯಮಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ಕೊಟ್ಟವರು ಎಂದು ಸ್ಮರಿಸಿದರು.

50 ವರ್ಷಗಳ ಕಾಲ ಕಲೆ, ಕಲಾವಿದರ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಜಾನಪದ ಕ್ಷೇತ್ರದಲ್ಲಿ ಹೆಚ್ಚಿನ ಪರಿಶ್ರಮ ಹಾಕಿ ಕೆಲಸ ಮಾಡಿದ್ದ ಅವರು, ಚಿತ್ರಕಲೆಯ ಬಗ್ಗೆ ಗ್ರಂಥ ರಚಿಸಿ ಪ್ರಕಟಿಸಿದ್ದರು. ರಾಜ್ಯದ ವಿವಿಧೆಡೆ ಸಂಚಾರ ಮಾಡಿ ಕಲಾವಿದರು, ಶಿಲ್ಪಿಗಳನ್ನು ಸಂದರ್ಶನ ಮಾಡಿದ್ದರು. ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟವನ್ನೂ ಮಾಡಿದ್ದರು ಎಂದು ಪ್ರೊ.ಕಾಳೇಗೌಡ ಸ್ಮರಿಸಿದರು.

ಕುಂಚದೊಂದಿಗೆ ಲೇಖನಿಯನ್ನೂ ಹಿಡಿಯುವ ಹವ್ಯಾಸ ರೂಢಿಸಿಕೊಂಡಿದ್ದ ತಿಪ್ಪೇಸ್ವಾಮಿ, ಕಲೆ ಮತ್ತು ಕಲಾವಿದರ ಪರಿಚಯ, ಕಲಾ ಗ್ರಂಥಗಳು ಹಾಗೂ ಕಲಾ ಪ್ರದರ್ಶನಗಳ ವಿಮರ್ಶೆ, ಐತಿಹಾಸಿಕ ಭಿತ್ತಿ ಚಿತ್ರಗಳು ಹಾಗೂ ಕಲಾ ಸಂಗ್ರಹಾಲಯಗಳ ಪರಿಚಯ, ನಿಯತಕಾಲಿಕೆ, ವಿಶೇಷ ಸಂಚಿಕೆಗಳಿಗೆ ನೂರಾರು ಲೇಖನ ಬರೆದಿದ್ದರು ಎಂದರು.

ಸಮಾಜಮುಖಿಯಾಗಿ ಏನೆಲ್ಲ ಕಾರ್ಯವನ್ನು ಮಾಡಬಹುದೋ ಅದೆಲ್ಲವನ್ನೂ ತಿಪ್ಪೇಸ್ವಾಮಿ ಮಾಡಿ ತೋರಿಸಿದ್ದರು. ಮೈಸೂರು ವಿವಿಯಲ್ಲಿ ಜಾನಪದ ಪರಿಕರಗಳು, ಉಪಕರಣಗಳು, ಆಟಿಕೆಗಳು, ತೊಗಲುಗೊಂಬೆ, ಸೂತ್ರದಗೊಂಬೆ ಇತ್ಯಾದಿ ಗ್ರಾಮೀಣ ಪ್ರದೇಶದ ವಸ್ತುಗಳಿಗಾಗಿ ವ್ಯವಸ್ಥಿತವಾದ ಸಂಗ್ರಹಾಲಯ ರೂಪಿಸಿದ್ದರು.

ಇದು ದೇಶದಲ್ಲಿ ಪ್ರಥಮ ವಸ್ತುಸಂಗ್ರಹಾಲಯ ಎಂಬ ಹಿರಿಮೆ ಪಡೆದಿತ್ತು. ಅದರ ಮೇಲ್ವಿಚಾರಕರಾಗಿ ದುಡಿದು ನಿವೃತ್ತರಾದರು ಎಂದು ಹೇಳಿದರು.

ಸನ್ಮಾನ: ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಡಾ.ಎಸ್.ನಾಗಣ್ಣ, ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ ವಿಜಯಕುಮಾರಿ ಕರಿಕಲ್ ಅವರನ್ನು ಸನ್ಮಾನಿಸಲಾಯಿತು.

ಪಿ.ಆರ್.ಟಿ. ಪ್ರತಿಷ್ಠಾನದ ಅಧ್ಯಕ್ಷ ಡಾ ರಾಜಶೇಖರ ಕದಂಬ, ಪಿ.ಆರ್.ಟಿ. ಅಧ್ಯಯನ ಪೀಠದ ಸಂದರ್ಶನ ಪ್ರಾಧ್ಯಾಪಕಿ ಪ್ರೊ.ಆರ್.ಸುನಂದಮ್ಮ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಲೋಲಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net