

ಹಾಸನ: ಹಾಸನ್ ಕೆನಲ್ ಕ್ಲಬ್ ವತಿಯಿಂದ ಭಾನುವಾರ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಹಮಿಕೊಂಡಿದ್ದ 5ನೇ ವರ್ಷದ ಶ್ವಾನ ಪ್ರದರ್ಶನದಲ್ಲಿ 25 ವಿವಿಧ ತಳಿಯ ಶ್ವಾನಗಳು ಭಾಗವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದವು.
ವಿವಿಧ ಜಿಲ್ಲೆಗಳಿಂದ 150 ಅತ್ಯುತ್ತಮ ಶ್ವಾನಗಳು ಭಾಗವಹಿಸಿದ್ದವು. ಶ್ವಾನ ಪ್ರದರ್ಶನ ಮಾತ್ರವಲ್ಲದೆ ಆರೋಗ್ಯ ಶಿಬಿರ, ಶ್ವಾನ ಸಾಕುವ ಬಗ್ಗೆ ಮಾಹಿತಿಯನ್ನು ಏರ್ಪಡಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ವಯೋಮಿತಿ ಆಧಾರದಲ್ಲಿ ಶ್ವಾನ ಪ್ರದರ್ಶನ ನಡೆಸಿ ಎಲ್ಲಾ ವಿಭಾಗದಲ್ಲೂ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಶಾಸಕ ಎಚ್.ಪಿ.ಸ್ವರೂಪ್, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಚಾಲನೆ ನೀಡಿದರು. ತೀರ್ಪುಗಾರರಾಗಿ ಮಂಗಳೂರಿನ ಮನೋಜ್ ಅವರು ಕಾರ್ಯನಿರ್ವಹಿಸಿದರು.
ಕರ್ನಾಟಕದ ತಳಿಯಾದ ಮುಧೋಳ್, ರಾಜ್ಯಪಾಲಿಂ ಜೊತೆಗೆ ಡಾಬರ್ ಮನ್, ಲ್ಯಾಬ್ರಡಾರ್, ರ್ಯಾಟ್ ವೀಲರ್, ಡ್ಯಾಶಂಡ್ ಡ್ಯಾಶ್, ಪಿಟ್ಬುಲ್, ಬಾಕ್ಸರ್, ಹಸ್ಕಿ, ಸೀಳುನಾಯಿ, ಜರ್ಮನ್ ಶಫರ್ಡ್, ಗೋಲ್ಡನ್ ರಿಟ್ರಿವರ್, ಬಿಯಗಲ್ ತಳಿಯ ಶ್ವಾನಗಳು ಬಂದಿದ್ದವು. ಚೀನಾ, ಟಿಬೇಟಿಯನ್, ಜರ್ಮನಿ ತಳಿಗಳನ್ನು ಒಂದೇ ಕಡೆ ಕಣ್ತುಂಬಿಕೊಳ್ಳುವ ಭಾಗ್ಯ ಸಾರ್ವಜನಿಕರಿಗೆ ಲಭ್ಯವಾಗಿತ್ತು. ಜೊತೆಗೆ ಪೊಮೇರಿಯನ್, ಸೇಂಟ್ ಬರ್ನಾಡ್, ಗ್ರೇಟ್ ಡೆನ್, ಶಿಟ್ಜ್ ಡಾಗ್ಗಳು ಪ್ರದರ್ಶನದಲ್ಲಿ ಭಾಗವಹಿಸಿ ನೋಡುಗರನ್ನು ಮುದಗೊಳಿಸಿದವು.
ಮಾಲೀಕರು ಹೇಳಿದಂತೆ ಶ್ವಾನಗಳು ಹೆಜ್ಜೆ ಹಾಕಿದ್ದು, ಓಡಾಡಿದ ರೀತಿ ಖುಷಿ ತರಿಸಿತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅನೇಕರು ಸಾಕು ಪ್ರಾಣಿಯ ಬಗ್ಗೆ ಮೆಚ್ಚುಗೆ ವ್ಯಯಕ್ತಪಡಿಸಿದರು. ಅದರಲ್ಲಿ ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದವರ ಸಂತಸಕ್ಕೆ ಪಾರವೇ ಇರಲಿಲ್ಲ. ಈ ವರೆಗೆ ತಮ ಶ್ವಾನಕ್ಕೆ ಸರಿಸಾಟಿ ಯಾರೂ ಇಲ್ಲವೆಂದುಕೊಂಡವರು ಇಲ್ಲಿನ ಶ್ವಾನಗಳನ್ನು ಕಂಡು ಬೆರಗಾದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಎಚ್.ಪಿ.ಸ್ವರೂಪ್ ಅವರು ಮಾತನಾಡಿ, ಮೂಕ ಪ್ರಾಣಿಗಳ ಜೊತೆಗೆ ಬಾಂಧವ್ಯ ಮನಸ್ಸಿಗೆ ಖುಷಿ ಕೊಡುತ್ತದೆ. ಮನೆಯಲ್ಲಿ ಪ್ರಾಣಿಗಳನ್ನು ಸಾಕುವ ರೂಢಿ ಬೆಳೆಸಿಕೊಳ್ಳಬೇಕು. ನಿಯತ್ತಿಗೆ ಹೆಸರಾಗಿರುವ ನಾಯಿ ಈಗ ಎಷ್ಟೋ ಜನರ ಜೀವನಾದಾಯವಾಗಿದೆ. ಶ್ವಾನ ಸಾಕಾಣಿಕೆಯಿಂದಲೇ ಸಾಕಷ್ಟು ಜನರು ಆರ್ಥಿಕವಾಗಿ ಚೇತರಿಕೆ ಕಂಡಿದ್ದಾರೆ. ಹಾಸನದಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಹೆಚ್ಚಲಿ ಎಂದು ಆಶಿಸಿದರು.
ಹಾಸನ್ ಕೆನಲ್ ಕ್ಲಬ್ ಅಧ್ಯಕ್ಷ ಡಾ.ಮಂಜುನಾಥ್, ಕಾರ್ಯದರ್ಶಿ ರಘು, ವಕೀಲರ ಸಂಘದ ಅಧ್ಯಕ್ಷ ಪ್ರಸನ್ನ, ಶೇಖರ್, ಕನ್ನಪರ ಒಕ್ಕೂಟ ಜಿಲ್ಲಾಧ್ಯಕ್ಷ ಶಂಕರೇಗೌಡ, ಹರೀಶ್, ನಟ ವಾಲೆ ಮಂಜು ಇತರರಿದ್ದರು.