ಕಲಹ ಮರೆತು ಮತ್ತೆ ಒಂದಾದ ದಂಪತಿ

court
Published on

ಬೀದರ್: ಮದುವೆಯಾದ ಕೆಲ ವರ್ಷಗಳಲ್ಲಿ ವಿವಿಧ ಕಾರಣಗಳಿಂದ ದೂರವಾಗಿದ್ದ ಪತಿ-ಪತ್ನಿಯನ್ನು ರಾಜಿ ಸಂಧಾನ ಮೂಲಕ ಮತ್ತೆ ಒಂದುಗೂಡಿಸಿದ ಪ್ರಸಂಗ ನಗರದಲ್ಲಿ ನಡೆದಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ ನೇತೃತ್ವದಲ್ಲಿ ನಡೆದ ರಾಜಿ ಸಂಧಾನದಲ್ಲಿ ತಾಲೂಕಿನ ವಿಜಯಕುಮಾರ ಮತ್ತು ಕಾವೇರಿ ದಂಪತಿಯನ್ನು ಒಂದಾಗಿಸುವ ಮೂಲಕ ಇಡೀ ಕುಟುಂಬವನ್ನು ಸಂತಸಪಡಿಸಲಾಗಿದೆ.
ವಿಜಯಕುಮಾರ 2013ರಲ್ಲಿ ಕಾವೇರಿ ಜತೆ ಮದುವೆ ಆಗಿದ್ದರು. ಕೆಲವರ್ಷ ಸುಂದರ ಬದುಕು ಸಾಗಿಸಿದ್ದರು. ಹಣ ಸಂಪಾದನೆ ಮಾಡು ಎಂದರೆ ಕುಡಿದು ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಕಾವೇರಿ ಪತಿಯನ್ನು ಬಿಟ್ಟು ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ಸಾಂತ್ವನ ಕೇಂದ್ರದಲ್ಲಿದ್ದರು. ನಂತರ ಕಾವೇರಿ ಸಾಂತ್ವನ ಕೇಂದ್ರದ ಮೂಲಕ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾ.ಎಸ್.ಕೆ. ಕನಕಟ್ಟೆ ನೋಟಿಸ್ ಜಾರಿ ಮಾಡಿ ದಂಪತಿಯನ್ನು ಪ್ರಾಧಿಕಾರಕ್ಕೆ ಕರೆಸಿ ಕೌಟುಂಬಿಕ ಸಮಸ್ಯೆ ಆಲಿಸಿ, ಗಂಡನಿಗೆ ಬುದ್ಧಿಮಾತು ಹೇಳಿ ಮಕ್ಕಳ ಹಿತದೃಷ್ಟಿಯಿಂದ ಒಂದಾಗುವುದು ಉತ್ತಮ ಮತ್ತು ಕಾನೂನಾತ್ಮಕ ವಿಚಾರ ತಿಳಿಸಿ ಮನಃಪರಿವರ್ತನೆ ಮಾಡಿ ಪತಿ-ಪತ್ನಿಯನ್ನು ಒಂದಾಗಿಸಿದರು.
ಇಬ್ಬರು ಪರಸ್ಪರ ಅರ್ಥ ಮಾಡಿಕೊಂಡು ಗೌರವದಿಂದ ಬದುಕುವುದೇ ಜೀವನ. ಬದಲಾದ ಕಾಲಘಟ್ಟದಲ್ಲಿ ದಂಪತಿ ಚಿಕ್ಕ-ಪುಟ್ಟ ವಿಚಾರಗಳಿಗೆ ಪೊಲೀಸ್ ಠಾಣೆ, ನ್ಯಾಯಾಲಯಕ್ಕೆ ಅಲೆದಾಡುವ ಬದಲಿಗೆ ಮನೆಯ ಹಿರಿಯರ ಮಾತು ಕೇಳಿ ನೆಮ್ಮದಿಯಿಂದ ಬದುಕಬೇಕು. ಆಗಲೇ ಸಂಸಾರಕ್ಕೊಂದು ಅರ್ಥ ಬರುತ್ತದೆ ಎಂದು ನ್ಯಾ.ಕನಕಟ್ಟೆ ಮನವರಿಕೆ ಮಾಡಿಕೊಟ್ಟರು.
ದಾಂಪತ್ಯದಲ್ಲಿ ಪ್ರೀತಿಯೊಂದಿದ್ದರೆ ಸಾಲದು, ಪರಸ್ಪರ ಗೌರವವೂ ಇರಬೇಕು. ನಾನು ಗಂಡು ನಾನೇ ಮೇಲು. ನಾನು ಹೇಳಿದಂತೆ ನಡೆಯಬೇಕು ಅಥವಾ ನಾನು ಹೆಣ್ಣು ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಅಹಂ ಬಂದರೆ ದಾಂಪತ್ಯ ಹಾಳುಗುವುದರಲ್ಲಿ ಎರಡು ಮಾತಿಲ್ಲ. ಇಬ್ಬರ ಇಷ್ಟ-ಕಷ್ಟಗಳು ಏನೇ ಇರಲಿ, ಪರಸ್ಪರ ಪ್ರೀತಿಯಿಂದ ಹಂಚಿಕೊಂಡು ಸಾಗಬೇಕು ಎಂದು ಬುದ್ಧಿಮಾತು ಹೇಳಿದರು.
ಸಾಂತ್ವನ ಕೇಂದ್ರದ ಸಿಬ್ಬಂದಿ ಗೀತಾ, ಸವಿತಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ ಶಂಕ್ರೆಪ್ಪ ಜನಕಟ್ಟೆ, ಜಗದೀಶ್ವರ ದೊರೆ, ಆಕಾಶ ಸಜ್ಜನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net