ಕಲಹ ಮರೆತು ಒಂದಾದ ದಂಪತಿ

16
Published on

ಮೈಸೂರು: ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿಚ್ಛೇದನ ಬಯಸಿದ್ದ 36 ಜೋಡಿಗಳು ಮತ್ತೆ ಒಂದಾದರು.
ನಾನಾ ಕಾರಣಗಳಿಂದ ಮನಸ್ತಾಪಗೊಂಡು ವಿಚ್ಛೇದನ ಬಯಸಿದ್ದ ದಂಪತಿಗಳನ್ನು ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅವರ ನೇತೃತ್ವದಲ್ಲಿ ಒಂದುಗೂಡಿಸಿ ಸಿಹಿ ತಿನ್ನಿಸಲಾಯಿತು. ಅಲ್ಲದೆ ನೆನಪಿನ ಕುರುಹಾಗಿ ಗಿಡಗಳನ್ನು ನೀಡಿ ಶುಭ ಹಾರೈಸಲಾಯಿತು. ಮೈಸೂರು ನಗರದಲ್ಲಿ 27 ಜೋಡಿಗಳು, ಗ್ರಾಮಾಂತರ ಪ್ರದೇಶದಲ್ಲಿ 9 ಜೋಡಿಗಳು ಒಂದಾದವು.
ವಿಚ್ಛೇದನಕ್ಕೆ ಮೈಸೂರು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ 1,322 ಅರ್ಜಿಗಳಲ್ಲಿ 200 ಪ್ರಕರಣಗಳನ್ನು ರಾಜೀ ಸಂಧಾನಕ್ಕೆ ಗುರುತಿಸಲಾಗಿತ್ತು. ಅದಾಲತ್‌ನಲ್ಲಿ ವಕೀಲರ ಸಹಾಯದಿಂದ 36 ದಂಪತಿಗಳಿಗೆ ಒಂದಾಗಿ ಬಾಳುವಂತೆ ತಿಳಿ ಹೇಳಲಾಯಿತು.
ಯಾವುದೋ ಕಾರಣದಿಂದ ಮನಸ್ತಾಪಗೊಂಡು ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಕುಳಿತು ಮಾತನಾಡಿದರೆ ಕೆಲ ಸಮಸ್ಯೆಗಳನ್ನು ಬಗೆಹರಿಸಬಹುದು. ಮಕ್ಕಳು ಹಾಗೂ ತಮ್ಮ ಭವಿಷ್ಯದ ದೃಷ್ಟಿಯಿಂದ ಮನಸ್ತಾಪ ಬಿಟ್ಟು ಎಲ್ಲರೂ ಒಂದಾದರೆ ಜೀವನ ಸುಖಕರವಾಗಿರುತ್ತದೆ ಎಂದು ನ್ಯಾಯಾಧೀಶರಾದ ಜಿ. ಎಸ್.ಸಂಗ್ರೇಶಿ ತಿಳಿಸಿದರು.
ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, 6 ಕೋಟಿ ರೂ.ಗೂ ಹೆಚ್ಚು ದಂಡ ಶುಲ್ಕ ಸಂಗ್ರಹವಾಗಿದೆ ಎಂದು ಇದೇ ವೇಳೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಕೌಟುಂಬಿಕ ನ್ಯಾಯಾಲಯಗಳ ನ್ಯಾಯಾಧೀಶರಾದ ಗಿರೀಶ್‌ಭಟ್, ವೇಲಾ ಕೊಡೆ, ರೋಡಾಲ್ಡ್ ಪೇರೆರಾ, ಮೈಸೂರು ಜಿಲ್ಲಾ ವಕೀಲರ ಸಂಘದ ಮಹದೇವ ಸ್ವಾಮಿ, ಕಾರ್ಯದರ್ಶಿ ಉಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net