ಕಲಶೇಶ್ವರ ಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ

2kls1 web
Published on

ಕಳಸ: ಕಲಶೇಶ್ವರ ದೇವಾಲಯದಲ್ಲಿ ಗುರುವಾರ ಶ್ರೀ ಕಲಶೇಶ್ವರ ಸ್ವಾಮಿ ಮಹಾರಥೋತ್ಸವ ವೈಭವದಿಂದ ನೆರವೇರಿತು. ಊರ ತುಂಬೆಲ್ಲ ತಳಿರು ತೋರಣಗಳನ್ನು ಕಟ್ಟಲಾಗಿತ್ತು. ದೇವಾಲಯ ವಿದ್ಯುದೀಪಗಳಿಂದ ಶೃಂಗಾರಗೊಂಡಿತ್ತು. ನಾಲ್ಕು ಕೂಡಿಗೆಗಳ ಮೂಲ ನಿವಾಸಿಗಳಾದ ಗೌಡಲು ಜನಾಂಗ ಸಿದ್ಧಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶ್ರೀ ಕಲಶೇಶ್ವರ ವಿರಾಜಮಾನ ಆಗುವುದನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದರು.

ಮಧ್ಯಾಹ್ನ 12ಕ್ಕೆ ಸ್ತುತಿ ಪಾಠಕರು ಸ್ತುತಿ ಘೊಷಗಳನ್ನು ಪಠಿಸುತ್ತ ಛತ್ರಿ, ಚಾಮರ, ಮಂಗಳ ವಾದ್ಯಗಳೊಂದಿಗೆ ಹೂವಿನ ಅಲಂಕಾರದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊತ್ತು ತರಲಾಯಿತು. ಕಲಶೇಶ್ವರನ ಉತ್ಸವ ಮೂರ್ತಿಯನ್ನು ಬ್ರಹ್ಮ ರಥದಲ್ಲಿ ಕುಳ್ಳಿರಿಸಿ ಪೂಜೆ ಮಾಡಲಾಯಿತು. ಭಕ್ತಾದಿಗಳು ದೇವರಿಗೆ ಫಲಪುಷ್ಪ ಅರ್ಚನೆ ಮಾಡಿದರು. ಭಕ್ತರು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಇತರೆ ಧಾನ್ಯ ಸಮರ್ಪಿಸಿ, ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ನಂತರ ಅಲಂಕೃತ ಬ್ರಹ್ಮರಥ ಎಳೆದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾತ್ರಿ ಗ್ರಾಮ ಪ್ರದಕ್ಷಿಣೆ ನಡೆಯಿತು. ಬ್ರಹ್ಮರಥದಲ್ಲಿದ್ದ ದೇವರು ಮನೆ ಬಾಗಿಲಿಗೆ ಬಂದಾಗ ಸರ್ವಜನಾಂಗದಿಂದಲೂ ಪೂಜೆ ನೆರವೇರಿತು. ಉತ್ಸವ ಕಳಸದ ಮಂಜಿನಕಟ್ಟೆಯವರೆಗೆ ಸಾಗಿತು. ಪಟಾಕಿ, ಸಿಡಿಮದ್ದುಗಳು, ಚೆಂಡೆ, ಓಲಗ, ವಿವಿಧ ವೇಷಭೂಷಣದ ವಿನೋದಾವಳಿಗಳು ಕಣ್ಣಿಗೆ ಹಬ್ಬವನ್ನುಂಟುಮಾಡಿದವು. ಹೊರನಾಡು, ಬಾಳೆಹೊಳೆ, ಕುದುರೆಮುಖ, ಜಾಂಬ್ಲೆ, ನೆಲ್ಲಿಬೀಡು, ಮರಸಣಿಗೆ, ಹಿರೇಬೈಲು, ಜಾವಳಿ, ಬಸರಿಕಟ್ಟೆ ಮತ್ತಿತರ ಕಡೆಯಿಂದ ಜನಸಾಗರವೇ ಹರಿದುಬಂದಿತ್ತು. ಭಕ್ತರು ಗಂಧ ಪ್ರಸಾದ ಸ್ವೀಕರಿಸಿದರು. ಪ್ರವಾಸಿಗರೂ ಜಾತ್ರೆಗೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ವ್ಯಾಪಾರ ಜೋರಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net