

ಬೀದರ್: ಕಲ್ಯಾಣ ಕ್ರಾಂತಿ ಮುಗಿದಿಲ್ಲ. ಅದು ನಿರಂತರ ಎಂದು ಪರುಷ ಕಟ್ಟೆಯ ಚನ್ನಬಸವಣ್ಣ ನುಡಿದರು.
ನಗರದ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ಮರಣವೇ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಗುರುವಾರ ನಡೆದ ಕಲ್ಯಾಣ ಕ್ರಾಂತಿ ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಕಟ್ಟ ಕಡೆಯ ವ್ಯಕ್ತಿಯೂ ತಲೆ ಎತ್ತಿ ಬದುಕುವಂತಾಗುವವರೆಗೂ ಕಲ್ಯಾಣ ಕ್ರಾಂತಿ ನಡೆಯುತ್ತಲೇ ಇರುತ್ತದೆ ಎಂದು ಹೇಳಿದರು.
ಕಲ್ಯಾಣ ಕ್ರಾಂತಿ ಸ್ವಾರ್ಥದ ಕ್ರಾಂತಿಯಲ್ಲ. ನಿಸ್ವಾರ್ಥದ ಕ್ರಾಂತಿ. ಸಕಲ ಜೀವರಾಶಿಗಳು ನೆಮ್ಮದಿಯಿಂದ ಬದುಕುವಂತಾಗಬೇಕೆಂಬುದೇ ಅದರ ಉದ್ದೇಶ ಎಂದು ತಿಳಿಸಿದರು.
ವಿಶ್ವದಲ್ಲಿ ಮಂಗಲಕರ ಪರಿವರ್ತನೆಗಾಗಿ ಕಲ್ಯಾಣ ಕ್ರಾಂತಿ ನಡೆಯಿತು. ಮರಣ ಬಂದರೂ ಸತ್ಯದ ದಾರಿ ಬಿಡಲಾರೆನೆಂಬುದು ಅದರ ತಿರುಳು ಎಂದು ಹೇಳಿದರು.
ಕೃತಯುಗದಲ್ಲಿ ಇಂದ್ರಾದಿ ಪದವಿಗಾಗಿ ದೇವ-ದಾನವರ ಯುದ್ಧಗಳಾದವು. ತ್ರೇತಾಯುಗದಲ್ಲಿ ಸೀತೆಗಾಗಿ ರಾಮ-ರಾವಣರ ಯುದ್ಧ, ದ್ವಾಪರಯುಗದಲ್ಲಿ ರಾಜ್ಯಕ್ಕಾಗಿ ಕೌರವ-ಪಾಂಡವರ ಯುದ್ಧ, ಕಲಿಯುಗದಲ್ಲಿ ಅಧಿಕಾರ, ಅಂತಸ್ತು, ಸಂಪತ್ತು, ಭೂಮಿಗಾಗಿ ಅನೇಕ ಯುದ್ಧಗಳು ನಡೆದವು ಎಂದು ತಿಳಿಸಿದರು.
ಇಡೀ ಪ್ರಪಂಚದಲ್ಲಿ ಮಾನವೀಯತೆಗಾಗಿ ನಡೆದ ಕ್ರಾಂತಿ ಕಲ್ಯಾಣ ಕ್ರಾಂತಿ ಮಾತ್ರ. ಅದರ ನೇತಾರ ಬಸವಣ್ಣನವರು. ಶರಣರು ಯಾವ ಪದವಿಯನ್ನೂ ಬಯಸಲಿಲ್ಲ. ಹೆಣ್ಣು, ಹೊನ್ನು, ಮಣ್ಣಿಗೆ ಆಸೆ ಪಡಲಿಲ್ಲ. ಸತ್ಯ ಸ್ಥಾಪನೆಗೆ ಪ್ರಾಣ ನೀಡಲು ಹಿಂಜರಿಯಲಿಲ್ಲ ಎಂದು ಹೇಳಿದರು.
ಅಕ್ಕ ಅನ್ನಪೂರ್ಣ ತಾಯಿ ಅವರು ಆ ಕಲ್ಯಾಣ ಕ್ರಾಂತಿಯನ್ನೇ ಮುಂದುವರಿಸಿ, ವಚನ ವಿಜಯೋತ್ಸವದ ಮೂಲಕ ಜಾಗೃತಿ ಮೂಡಿಸಿದರು ಎಂದರು.
ನೀಲಮ್ಮನ ಬಳಗದ ವಿಜಯಲಕ್ಷ್ಮಿ ಟೇಕೂರೆ ಮತ್ತು ಶಿವಲೀಲಾ ಹೊಕ್ರಾಣೆ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿವರ ಕಾರ್ಯಗಳನ್ನು ನೆನೆದರು.
ನೀಲಮ್ಮನ ಬಳಗದ ಸಿದ್ದಮ್ಮ ಮಠಪತಿ ಕಲ್ಯಾಣ ಕ್ರಾಂತಿ ಗೀತೆ ಹಾಡುವ ಮೂಲಕ ಚಿಂತನ ಗೋಷ್ಠಿಗೆ ಚಾಲನೆ ನೀಡಿದರು.
ಪ್ರಥಮ ದರ್ಜೆ ಗುತ್ತಿಗೆದಾರ ಆರ್.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಚಾರ್ಟೆಡ್ ಅಕೌಂಟೆಂಟ್ ಉಮೇಶ ಮೂಲಿಮನಿ, ಕೆ.ಎಂ.ಎಫ್. ನಿವೃತ್ತ ಅಧಿಕಾರಿ ಡಾ. ಮಲ್ಲಿಕಾರ್ಜುನ ಬುಕ್ಕಾ, ವಿಜಯಲಕ್ಷ್ಮಿ ಗೋರ್ಟೆಕರ್ ಇದ್ದರು.
ನೀಲಮ್ಮನ ಬಳಗದ ಸಹೋದರಿಯರು ಪ್ರಾರ್ಥನೆ ನಡೆಸಿಕೊಟ್ಟರು. ಮಧುಲತಾ ಖಪಲೆ ವಚನ ಪಠಣ ಮಾಡಿದರು. ಜ್ಯೋತಿ ಪಾಟೀಲ, ಕದಳಿಶ್ರೀ ವಚನ ಗಾಯನ ಮಾಡಿದರು.
ಶ್ರೀದೇವಿ ಮಲ್ಲಿಕಾರ್ಜುನ ಔರಾದೆ ಭಕ್ತಿ ದಾಸೋಹಗೈದರು. ಬಸವ ಚಿಕಲಿಂಗೆ ನಿರೂಪಿಸಿದರು. ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು.
ಉದ್ಯಮಿ ರತನ್ ಟಾಟಾಗೆ ಶ್ರದ್ಧಾಂಜಲಿ
ಲಿಂಗಾಯತ ಮಹಾ ಮಠದಿಂದ ಒಂದು ನಿಮಿಷ ಮೌನಾಚರಣೆ ಮೂಲಕ ಅಗಲಿದ ದೇಶದ ದಿಗ್ಗಜ ಉದ್ಯಮಿ ರತನ್ ಟಾಟಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರತನ್ ಟಾಟಾ ಅವರು ಭಾರತದ ಉದ್ಯಮ ಕ್ಷೇತ್ರದ ರತ್ನವಾಗಿದ್ದರು. ಭಾರತದ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಸಾಹಿತಿ ರಮೇಶ ಮಠಪತಿ ಬಣ್ಣಿಸಿದರು.
ವಿಶ್ವದ ಹಲವಾರು ದೇಶಗಳಲ್ಲಿ ಅವರ ಉದ್ಯಮಗಳಿದ್ದರೂ ಅವರು ಸರಳ, ನಿರಾಡಂಬರದ ಜೀವನ ಸಾಗಿಸುತ್ತ ಸಂತನಂತಿದ್ದರು. ದೇಶದ ವಿಪತ್ತಿನ ಸಂದರ್ಭಗಳಲ್ಲಿ ಅಪಾರ ಸಂಪತ್ತು ದೇಶಕ್ಕೆ ನೀಡಿದ ದೇಶಭಕ್ತರಾಗಿದ್ದರು ಎಂದು ಸ್ಮರಿಸಿದರು.
ಎಷ್ಟೋ ಅನಾಥ ಮಕ್ಕಳಿಗೆ ದಾರಿದೀಪ, ಲಕ್ಷಾಂತರ ಕಾರ್ಮಿಕರ ಅನ್ನದಾತರಾಗಿದ್ದರು. ಮಾನವೀಯತೆಯ ಗಣಿಯಾಗಿದ್ದ ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿ ನುಡಿ ನಮನ ಸಲ್ಲಿಸಿದರು.