

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹಣದ ಆಸೆಗಾಗಿ ವ್ಯಾಪಾರಸ್ಥರು ಆಹಾರ ಉತ್ಪನ್ನಗಳಲ್ಲಿ ಕಲಬೆರಕೆ ಮಾಡುತ್ತಾರೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ವಿಫಲರಾಗುತ್ತಿರುವುದರಿಂದ ಜನಾಂದೋಲನ ಒಂದೇ ನಮ್ಮ ಮುಂದೆ ಉಳಿದಿರುವ ಮಾರ್ಗ ಎಂದು ಶಾಸಕ, ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಸಹಜ ಸಮೃದ್ಧ ಆಯೋಜಿಸಿದ್ದ 2 ದಿನಗಳ ಗೆಡ್ಡೆ ಗೆಣಸು ಮೇಳವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ರಸಾಯನಿಕ ಬಳಸಿ ಬೆಳೆ ತೆಗೆಯಲಾಗುತ್ತಿದೆ, ಹಾಲು ವಿಷಪೂರಿತಗೊಂಡಿದೆ, ಕಲುಷಿತ ಆಹಾರ ಹೆಚ್ಚಿದೆ. ವ್ಯಾಪಾರಸ್ಥರು ಮಾನವೀಯತೆ ಮರೆತು ವ್ಯವಹಾರ ನಡೆಸುತ್ತಿರುವುದು ಇದಕ್ಕೆಲ್ಲ ಕಾರಣ. ಇದರಿಂದ ಚಿಕ್ಕ ವಯಸ್ಸಿನವರು ಕ್ಯಾನ್ಸರ್, ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಮುಂದಿನ ಜನಾಂಗದ ಆರೋಗ್ಯದ ಹಿತದೃಷ್ಟಿಯಿಂದ ಇಂಥ ಮೇಳಗಳು ನಡೆಯಬೇಕು. ಸಮಾಜದ ಸಂರಕ್ಷಣೆಗಾಗಿ ಸಹಜ ಸಮೃದ್ಧ ಸಂಘಟನೆ ಕೆಲಸ ಮಾಡುತ್ತಿದೆ ಎಂದರು.
ಸಹಜ ಸಮೃದ್ಧ ನಿರ್ದೇಶಕ ಜಿ. ಕೃಷ್ಣಪ್ರಸಾದ ಮಾತನಾಡಿ, ಮನೆಯ ಆವರಣದ ಚಿಕ್ಕ ಜಾಗದಲ್ಲಿ ಗೆಡ್ಡೆ ಗೆಣಸು ಸುಲಭದಲ್ಲಿ ಬೆಳೆಯಬಹುದು. ಬರಗಾಲ, ಅತಿವೃಷ್ಟಿ ಪರಿಣಾಮ ಬೀರುವುದಿಲ್ಲ. ಗೆಡ್ಡೆ ಗೆಣಸಿನಲ್ಲಿ ರೋಗ ನಿರೋಧಕ ಶಕ್ತಿ ಅಧಿಕ. ಪ್ರತಿ ಮೇಳದಿಂದ ಮೇಳಕ್ಕೆ ವಹಿವಾಟು ಜಾಸ್ತಿ ಆಗುತ್ತಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಅಧ್ಯಕ್ಷ ಬಾಪುಗೌಡ ಬಿರಾದಾರ, ಕಾರ್ಯದರ್ಶಿ ಎ.ವಿ. ಸಂಕನೂರ, ಅಖಿಲ ಭಾರತ ಗೆಡ್ಡೆ ಗೆಣಸು ಸಂಶೋಧನಾ ಯೋಜನೆ ಮುಖ್ಯಸ್ಥ ಡಾ. ಇಮಾಮ್ ಜತ್ತ, ಗೆಡ್ಡೆ ಗೆಣಸು ಬೆಳೆಗಾರ ನಾಗರಾಜ ಹುಲಗೂರ, ಪ್ರಕಾಶ ಹಿರೇಮಠ, ಈಶ್ವರಪ್ಪ ಅಂಗಡಿ ಇದ್ದರು.
ಬಗೆ ಬಗೆಯ ಗೆಡ್ಡೆಗಳು
ಮೇಳದಲ್ಲಿ ಬಗೆ ಬಗೆಯ ಗೆಡ್ಡೆಗಳು ಗಮನ ಸೆಳೆದವು. ಕಪ್ಪು ಅರಿಶಿಣ, ಮಾವಿನ ಶುಂಠಿ, ಕೆಸು, ಬಿಳಿ ಕಾಚಲ್, ಬಳ್ಳಿ ಬಟಾಟೆ, ಸುವರ್ಣ ಗಡ್ಡೆ, ನೀಲಿ ಕಾಚಲ್, ಸಿಹಿ ಗೆಣಸು, ಹಳದಿ ಗೆಣಸು, ಗ್ರೇಟರ್ ಯಾಮ್ ಮರ ಗೆಣಸು, ಬಳ್ಳಿ ಗೆಣಸು, ಕೋವೆ ಗೆಡ್ಡೆ, ಕಿಡ್ನಿ ಆಲೂಗಡ್ಡೆ, ಇತ್ಯಾದಿಗಳು ಇದ್ದವು.