

ಹೊಳೆನರಸೀಪುರ: ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆಹಾರ ಸುರಕ್ಷತಾಧಿಕಾರಿ ಕೆ.ವಿನಯ್ ಎಚ್ಚರಿಸಿದರು.
ಸಂತೆಯಲ್ಲಿ ಕಲಬೆರಕೆ ಬೆಣ್ಣೆ ಮಾರಾಟದ ದೂರು ಬಂದ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದ ಸುಭಾಷ್ ಚೌಕದ ಮುಖ್ಯ ರಸ್ತೆ ಬದಿ ವಹಿವಾಟುದಾರರಿಗೆ ಅರಿವು ಮೂಡಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಂದ ಕೃಷಿಕರು ಶುದ್ಧ ಬೆಣ್ಣೆ ಮಾರಾಟ ಮಾಡುತ್ತಾರೆಂದು ಗ್ರಾಹಕರು ನಂಬಿದ್ದಾರೆ. ಅದಕ್ಕೆ ದ್ರೋಹ ಮಾಡಬೇಡಿ ಎಂದು ಅವರು ವಿನಂತಿಸಿದರು.
ಕೆಲವು ದಂಧೆಕೋರರು ಕಲಬೆರಕೆ ಬೆಣ್ಣೆ ಮಾರುತ್ತಿದ್ದಾರೆ. ಅಂಥವರ ಬಗ್ಗೆ ಗ್ರಾಹಕರು ಖಚಿತ ಮಾಹಿತಿ ನೀಡಿದರೆ ಕ್ರಮ ವಹಿಸಲಾಗುವುದು ಎಂದರು.
ಹೆಚ್ಚಿನ ಹಣದ ಆಸೆಗಾಗಿ ಶುದ್ಧ ಬೆಣ್ಣೆಗೆ ವನಸ್ಪತಿ, ಪ್ರಾಣಿಗಳ ಕೊಬ್ಬು, ಬೇಯಿಸಿದ ಆಲೂಗೆಡ್ಡೆ ಸೇರಿಸಿ ಮೋಸ ಮಾಡುವ ಜಾಲ ಹೆಚ್ಚಾಗಿದೆ. ಕಲಬೆರಕೆ ಪದಾರ್ಥಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಜನರಿಗೆ ಹೃದಯ ಸೋಂಕು ಬರುತ್ತದೆ. ಕಲಬೆರಕೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರ ಠಾಣೆಯ ಪೊಲೀಸರು ಮತ್ತು ಗೃಹರಕ್ಷಕ ಸಿಬ್ಬಂದಿ ಹಾಜರಿದ್ದರು.