

ಕಲಬುರಗಿ: ಆಧ್ಯಾತ್ಮ ರಾಜಧಾನಿ ವಾರಣಾಸಿಯಲ್ಲಿ ಕಾಶಿ ಜಗದ್ಗುರಗಳ ಸಾನ್ನಿಧ್ಯದಲ್ಲಿ ವೀರಶೈವ ಮಹಾ ಕುಂಬಾ ವಿಶ್ವರಾಧ್ಯ ಗುರುಕುಲ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಭಕ್ತರು ಬುಧವಾರ ಪಯಣ ಬೆಳೆಸಿದರು.
ಸಂಜೆ 4ಕ್ಕೆ ಸಾರ್ವಜನಿಕ ಉದ್ಯಾನವನದಿಂದ ಶಖಾಪುರ ಶ್ರೀಗಳ ನೇತೃತ್ವದಲ್ಲಿ ಶ್ರೀ ವಿಶ್ವಾರಾಧ್ಯರ ಮತ್ತು ರೇಣುಕಾಚಾರ್ಯರ ಮೂರ್ತಿ ಮೆರವಣಿಗೆಯೊಂದಿಗೆ ರೈಲು ನಿಲ್ದಾಣದವರೆಗೆ ಮೆರವಣಿಗೆ ಮೂಲಕ ತೆರಳಿ ರಾತ್ರಿ 8ಕ್ಕೆ ರೈಲು ಮೂಲಕ ಕಾಶಿಗೆ ಪ್ರಯಾಣ ಬೆಳೆಸಲಾಯಿತು.
ಜೇವರ್ಗಿ ತಾಲೂಕಿನ ಶಖಾಪುರ ಸಿದ್ದರಾಮ ಶಿವಾಚಾರ್ಯರ ಸಂಕಲ್ಪದಂತೆ ಜಗದ್ಗುರು ಪಂಚಾಚಾರ್ಯರ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾಶಿಯಲ್ಲಿ ಆಯೋಜಿಸಲಾಗಿದೆ. ಈ ನಿಮಿತ್ತ ಜಿಲ್ಲೆಯಿಂದ ವಿಶೇಷ ರೈಲು ಮೂಲಕ ಭಕ್ತರು ಪ್ರಯಾಣ ಬೆಳೆಸಿದರು.
ಕಾಶಿಯಲ್ಲಿ 15ರಂದು ಕಾಶಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಂತರ ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಎಸ್.ಎಸ್. ಹುಲ್ಲೂರ, ಎಂ.ಎಸ್. ಪಾಟೀಲ್ ನರಿಬೋಳ ಸೇರಿ 25 ಸಮಾಜ ಸೇವಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸಿದ್ಧಾಂತ ಶಿಖಾಮಣಿ ಆ್ಯಪ್ ಬಿಡುಗಡೆಗೊಳ್ಳಲಿದೆ.
ಕಲಬುರಗಿಯಿಂದ 2,500 ಭಕ್ತರು ಬುಧವಾರ ಕಾಶಿಯತ್ತ ಪಯಣ ಬೆಳೆಸಿದರು. ಮೆರವಣಿಗೆಗೆ ವಿಶ್ವಹಿಂದು ಪರಿಷತ್ ಪ್ರಮುಖ ಲಿಂಗರಾಜಪ್ಪ ಅಪ್ಪ ಚಾಲನೆ ನೀಡಿದರು. ಶಖಾಫುರ ಮಠದ ಶ್ರೀ ಸಿದ್ಧರಾಮ ಶಿವಾಚಾರ್ಯರು, ಪಾಳಾದ ಶ್ರೀ ಗುರುಮೂರ್ತಿ ಸ್ವಾಮೀಜಿ, ವೆಂಕಟಬೆನೂರ ಶ್ರೀ, ಸ್ಟೇಷನ್ ಬಬಲಾದ ಶ್ರೀ, ತೊನಸಳ್ಳಿ ಶ್ರೀ, ಎಂ.ಎಸ್. ಪಾಟೀಲ್, ಸೋಮಶೇಖರ ಹಿರೇಮಠ, ಗೌರಿ ಚಿತಕೋಟ, ತಾತಾಗೌಡ, ಅನ್ನಪೂರ್ಣ ಹಿರೇಮಠ, ಪೂಜಾ ಮಠಪತಿ, ಶಂಕರಗೌಡ ಪಾಟೀಲ್, ಮಲ್ಲಿನಾಥ ಗೌಡ, ರವೀಂದ್ರ ಮುತ್ತಿನ್, ಮಂಜುನಾಥ ಅಂಕಲಗಿ, ಸುರೇಶ ತಿಪಶೆಟ್ಟಿ ಮತ್ತು ಭಕ್ತರು ಪಾಲ್ಗೊಂಡಿದ್ದರು.