ಕಲಬುರಗಿಯಲ್ಲಿ ಮತ್ತೆ ಕಾಣಿಸಿದ ಚಿರತೆ!; ದಂಡಗುಂಡ ಅರಣ್ಯ ಪ್ರದೇಶ ಓಡಾಟ

PH 05
Published on

ಚಿತ್ತಾಪುರ: ಕೆಲದಿನ ಹಿಂದೆ ಆಳಂದ ಮತ್ತು ಅಫಜಲಪುರ ಗಡಿಯಲ್ಲಿ ಚಿರತೆ ಕಾಣಿಸಿಕೊಂಡಿರುವ ಸುದ್ದಿಯಾಗಿತ್ತು. ಇದೀಗ ದಂಡಗುಂಡದ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡಿರುವ ವದಂತಿ ಹರಡಿದ್ದು, ಜನರು ಹೊಲ-ಗದ್ದೆಗಳಿಗೆ ಓಡಾಡುವುದಕ್ಕೂ ಆತಂಕಪಡುವAತಾಗಿದೆ.

ದಂಡಗುಂಡದಿಂದ ಯಾಗಾಪುರ ಮಾರ್ಗಮಧ್ಯದ ಅರಣ್ಯ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ವಿಜಯಕುಮಾರ ಬಡಿಗೇರ ನೇತೃತ್ವದಲ್ಲಿ ಸಿಬ್ಬಂದಿ ದಂಡಗುಂಡ ಅರಣ್ಯದಲ್ಲಿ ಪರಿಶೀಲನೆ ನಡೆಸಿದ್ದರೂ ಮಳೆಯಿಂದಾಗಿ ಹೆಜ್ಜೆಗುರುತು ಕಂಡು ಬಂದಿಲ್ಲ. ಅರಣ್ಯ ಪ್ರದೇಶವಾಗಿದ್ದರಿಂದ ವನ್ಯ ಪ್ರಾಣಿಗಳು ಇರಬಹುದು ಎನ್ನಲಾಗಿದೆ.

ಸೋಮವಾರ ದಂಡಗುಂಡ ಬಸವಣ್ಣನ ಜಾತ್ರೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿಎಫ್ ಸುಮೀತ್‌ಕುಮಾರ್, ಎಸಿಎಫ್ ಮಹ್ಮದ್ ಮುನೀರ್ ಅಹ್ಮದ್ ಮಾರ್ಗದರ್ಶನದಲ್ಲಿ ಚಿರತೆ ತಿರುಗಾಡುವಂಥ ಸ್ಥಳಗಳನ್ನು ಗುರುತಿಸಿ ಒಂದು ಬೋನು ಅಳವಡಿಸಲಾಗಿದೆ. ನಮ್ಮ ಸಿಬ್ಬಂದಿಯೂ ನಿಗಾ ಇರಿಸಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

ಚಿರತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ದಂಡಗುಂಡ, ಸಂಕನೂರ, ಯಾಗಾಪುರ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಡಂಗೂರ ಸಾರಲಾಗಿದೆ. ಹೊಲ-ಗದ್ದೆಗಳಿಗೆ ಗುಂಪಾಗಿ ಹೋಗಿ. ರಾತ್ರಿ ಹೊತ್ತಿನಲ್ಲಿ ಹೊರಗಡೆ ಬರಬೇಡಿ ಎಂದು ಸಲಹೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಸಿಬ್ಬಂದಿ ಸಂತೋಷ ತೆಂಗಳಿ, ರಮೇಶ, ಚಂದ್ರಹಾಸ ನಾಯಕ, ಜಾಫರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net