ಕಲಬುರಗಿಯಲ್ಲಿ ಜೈ ಶ್ರೀರಾಮ ಝೇಂಕಾರ

IMG20220410153040
ಕಲಬುರಗಿಯಲ್ಲಿ ಭಾನುವಾರ ಶ್ರೀರಾಮನವಮಿ ನಿಮಿತ್ತ ಶ್ರೀರಾಮ ನವಮಿ ಉತ್ಸವ ಸಮಿತಿ ಏರ್ಪಡಿಸಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮ.
Published on

ಕಲಬುರಗಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶ್ರೀರಾಮ ನವಮಿಯನ್ನು ಭಾನುವಾರ ಶೃದ್ಧೆ, ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಯರ್ಾದಾ ಪುರುಷೋತ್ತಮನಿಗೆ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಜರುಗಿದವು. ಶ್ರೀರಾಮನಿಗೆ ಮಾಡಿದ ಅಲಂಕಾರ ಕಣ್ಮನ ಸೆಳೆಯುವ ಜತೆಗೆ ಭಕ್ತಿಭಾವ ಮೂಡಿಸಿತು.ನಗರದಲ್ಲಿ ನಡೆದ ಭವ್ಯ ಶೋಭಾಯಾತ್ರೆಗೆ ಸಹಸ್ರಾರು ಭಕ್ತರು ಸಾಕ್ಷಿಯಾದರು.

ಎಲ್ಲೆಡೆ ಬೋಲೋ ಜೈ ಶ್ರೀರಾಮ, ಸೀತಾಪತಿ ಜೈ ಶ್ರೀರಾಮ, ಜೈ ಸಿಯಾರಾಮ-ಜೈ ಜೈ ಸಿಯಾರಾಮ, ರಾಮಭಕ್ತ ಹನುಮಾನ ಕೀ ಜೈ, ಭಜರಂಗಿ ಭಜರಂಗಿ ಎಂಬಿತ್ಯಾದಿ ಜೈಘೋಷಗಳು ಮೊಳಗಿದವು. ಎಲ್ಲೆಡೆ ಕೇಸರಿ(ಭಗವಾ) ಧ್ವಜ ರಾರಾಜಿಸಿದವು. ಇಡೀ ನಗರವೇ ಭಗವಾಮಯವಾಗಿತ್ತು. ಈ ಸಲದ ಉತ್ಸವ ಸಾರ್ವಜನಿಕರಲ್ಲಿ ವಿಶೇಷವಾಗಿ ಯುವ ಸಮೂಹದಲ್ಲಿ ಎಲ್ಲಿದ್ದ ಜೋಶ್ ತಂದಿತ್ತು. ಹೀಗಾಗಿ ಕಡಕ್ ಬಿಸಿಲಿನ ತಾಪವನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯ ಯುವಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿರುವುದು ವಿಶೇಷವಾಗಿತ್ತು.

ಶ್ರೀರಾಮ ನವಮಿ ಉತ್ಸವ ಸಮಿತಿ, ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಏರ್ಪಡಿಸಿದ್ದ 15 ಅಡಿ ಎತ್ತರದ ಭವ್ಯ, ಆಕರ್ಷಕ ಶ್ರೀರಾಮನ ಮೂರ್ತಿಯ ಶೋಭಾಯಾತ್ರೆಯಲ್ಲಿ 30 ಸಾವಿರಕ್ಕೂ ಹೆಚ್ಚು ಯುವಕರು ಭಾಗವಹಿಸಿ, ರಾಮನಾಮ ಘೋಷಣೆ ಜತೆಗೆ ಬನಾಯೆಂಗೇ ಮಂದಿರ, ಭಗವಾ ರಂಗ್, ಪ್ರಭು ಶ್ರೀರಾಮಕೀ ಜೈ, ಹರ್ ಘರ್ ಭಗವಾ ಛಾಯೇಗಾ, ಭಾರತ್ ಕಾ ಬಚ್ಚಾ ಬಚ್ಚಾ ಜೈಶ್ರೀರಾಮ ಬೋಲೇಗಾ, ರಾಮ್ ಜೀ ಕೀ ನಿಕಲಿ ಸವಾರಿ, ಹಮ್ ಭಗವಾ ಧಾರಿ ಹೈ, ಶ್ರೀರಾಮ ಜಾನಕೀ… ಸೇರಿ ಶ್ರೀರಾಮನ ನಾನಾ ಹಾಡುಗಳಿಗೆ ಡಿಜೆ ಸೌಂಡ್ ಮೇಲೆ ಮೆರವಣಿಗೆಯುದ್ದಕ್ಕೂ ನೃತ್ಯ ಮಾಡಿದರು. ಯುವಕರಿಗೆ ಹಲಗೆ, ಡೊಳ್ಳು, ನಾಸಿಕ್ ಡೋಲು ಸಾಥ್ ನೀಡಿತು.

ನಗರದ ರಾಮತೀರ್ಥ ದೇವಸ್ಥಾನ ಮತ್ತು ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಒಟ್ಟು ಮೂರು ಮೂರ್ತಿಗಳ ಮೆರವಣಿಗೆ ನಗರದ ಜಗತ್ ವೃತ್ತದವರೆಗೆ ಆಗಮಿಸಿದ ನಂತರ ಶೋಭಾಯಾತ್ರೆ ಸಂಪನ್ನವಾಯಿತು. ಎರಡೂ ಕಡೆಯಿಂದ ಆಗಮಿಸಿದ ಶೋಭಾಯಾತ್ರೆ ಸೂಪರ್ ಮಾಕರ್ೆಟ್ನ ಪೊಲೀಸ್ ಚೌಕ್ ಬಳಿ ಸಮ್ಮಿಲನವಾಗಿ ಮುಂದೆ ಸಾಗಿದವು. ನಗರ ಸೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಿ ಶ್ರೀರಾಮನ ಮೂರ್ತಿಯ ದರ್ಶನ ಪಡೆದರು. ಅದ್ದೂರಿ ಮೆರವಣಿಗೆಯು ಇಡೀ ದಿವಸ ನಗರದಲ್ಲಿ ಶ್ರೀರಾಮನ ಝೇಂಕಾರ ಮಾರ್ದನಿಸುವಂತೆ ಮಾಡಿತು.

ಶೋಭಾಯಾತ್ರೆ ನಗರದ ಖಾದ್ರಿ ಚೌಕ್ ಬಳಿ ಬಂದಾಗ ಭಾಗವಹಿಸಿದ್ದ ಸಹಸ್ರಾರು ಯುವಕರು ಪ್ರಧಾನಿ ನರೇಂದ್ರ ಮೋದಿ ಅವರ ಜೈಕಾರ ಕೂಗಿದರು. ಮೋದಿ, ಮೋದಿ, ಮೋದಿ ಜತೆಯಲ್ಲಿ ಸುಮಾರು ಒಂದು ಗಂಟೆ ಶ್ರೀರಾಮನ ಜೈಕಾರ ನಡೆಯಿತು. ಇದು ಸೂಕ್ಷ್ಮ ಪ್ರದೇಶವಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮೆರವಣಿಗೆ ಇಲ್ಲಿಂದ ಸುರಳಿತ ಮುಂದೆ ಸಾಗಿದ ನಂತರವೇ ಪೊಲೀಸರು ನಿಟ್ಟುಸಿರು ಬಿಟ್ಟರು.

ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀನಿವಾಸ ಸರಡಗಿಯ ಅಪ್ಪಾರಾವ ದೇವಿ ಮುತ್ತ್ಯಾ, ಕಡಗಂಚಿಯ ಶ್ರೀ ವೀರಭದ್ರ ಶಿವಾಚಾರ್ಯರು, ಪಾಳಾ ಸ್ವಾಮೀಜಿ, ಕೇದಾರ ಶ್ರೀಗಳು ಸೇರಿದಂತೆ ಹಲವು ಪೂಜ್ಯರು ಭಾಗವಹಿಸಿದ್ದರು. ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕ ಬಸವರಾಜ ಮತ್ತಿಮಡು, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಹಷರ್ಾನಂದ ಗುತ್ತೇದಾರ್, ದಿವ್ಯಾ ಹಾಗರಗಿ, ಧನರಾಜ ವಾರಿಕ್, ಮಣಿಕಂಠ ರಾಠೋಡ್, ವೈಜಿನಾಥ ಝಳಕಿ, ಸಂದೇಶ ಪವಾರ, ರೇಣುಕಾಚಾರ್ಯ, ಸಂಘಟಕರಾದ ರಾಜು ಭವಾನಿ, ಅಪ್ಪು ಗುಬ್ಯಾಡ, ಮಹೇಶ ಗೊಬ್ಬುರ ಸೇರಿ ಅಪಾರ ಸಂಖ್ಯೆಯ ರಾಮ ಭಕ್ತರು, ಮುಖಂಡರು ಇದ್ದರು.

ಕೇಸರಿಮಯವಾದ ಮಾರ್ಗಗಳು: ಶ್ರೀರಾಮನ ಮೂರ್ತಿ ಮೆರವಣಗೆ ಸಾಗಿದ ಆಳಂದ್ ಚೆಕ್​ಪೋಸ್ಟ್​ನಿಂದ ಜಗತ್ ವೃತ್ತದವರೆಗಿನ ಇಡೀ ಮಾರ್ಗವೇ ಕೇಸರಿಮಯ ಆಗಿತ್ತು. ಸಹಸ್ರಾರು ಯುವಕರು ಕೊರಳಿಗೆ ಕೇಸರಿ ಶಾಲು, ತಲೆಗೆ ಪೇಟ ಹಾಕಿಕೊಂಡು ಡಿಜೆ ಸೌಂಡ್ನಿಂದ ಹೊರಬಂದ ಶ್ರೀರಾಮನ ಹಾಡುಗಳಿಗೆ ನೃತ್ಯ ಮಾಡಿದರು. ಕೆಲವು ಯುವಕರು ಕೇಸರಿ ಬಟ್ಟೆ ಧರಿಸಿ, ಮಾರ್ಗದ ಕಂಬಗಳಲ್ಲಿ ಭಗವಾ ಧ್ವಜ ಅಳವಡಿಸಿದ್ದರಿಂದ ಇಡೀ ರಸ್ತೆಯಲ್ಲಿ ಎತ್ತ ನೋಡಿದರೂ ಕೇಸರಿಯೇ ಕಾಣುತ್ತಿತ್ತು. ಯುವಕರು ಕೆನ್ನೆಯ ಮೇಲೆ ಶ್ರೀರಾಮ ಮತ್ತು ಭಗವಾ ಧ್ವಜವನ್ನು ಸಹ ಚಿತ್ರಿಸಿಕೊಂಡಿರುವುದು ಗಮನ ಸೆಳೆಯಿತು.

ಪ್ರಸಾದ, ಪಾನಕ, ತಂಪು ಪಾನೀಯ…: ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಅಪಾರ ರಾಮ ಭಕ್ತರಿಗೆ ವಿವಿಧ ಸಂಘ ಸಂಸ್ಥೆಗಳು, ಅಂಗಡಿಗಳ ಮಾಲಿಕರು, ಗಣ್ಯರು ಅಲ್ಲಲ್ಲಿ ಪ್ರಸಾದ, ಪಾನಕ, ಮಜ್ಜಿಗೆ, ತಂಪು ಪಾನೀಯದ ವ್ಯವಸ್ಥೆ ಮಾಡಿದರು. ರಜಪೂತ ಏಕತಾ ಸಮಿತಿ, ಚಂದು ಪಾಟೀಲ್ ಅಭಿಮಾನಿಗಳ ಬಳಗ, ಗಂಗಾ ಪರಿವಾರದಿಂದ ಚಿತ್ರಾನ್ನ, ಸಾಂಬಾರ, ಶಿರಾ, ಉಪ್ಪಿಟ್ಟು ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶರಣು ಪಪ್ಪಾ ಅಭಿಮಾನಿಗಳ ಬಳಗ, ಯುನೈಟೆಡ್ ಆಸ್ಪತ್ರೆ, ಮಾಣಿಕಸಿಂಗ್ ಮೆಮೋರಿಯಲ್ ಶಾಲೆ, ಸಿದ್ಧಣಗೌಡ ಪಾಟೀಲ್ ಧಮ್ಮೂರ ಅವರಿಂದ ಅನ್ನ, ಸಾಂಬಾರ, ಮಜ್ಜಿಗೆ, ಪಾನಕ, ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಉತ್ಸವ ಸಮಿತಿಯಿಂದಲೂ ಅಲ್ಲಲ್ಲಿ ಪಾನಕ, ತಂಪು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಖಾದ್ರಿ ಚೌಕ್ ಬಳಿ ವಾರ್ಡ್​ 10ರ ಮುಸ್ಲಿಂ ಮುಖಂಡ ರಹೀಮ್ ಸಾಬ್ ಮುಲ್ಲಾ ಅವರು ಭಕ್ತರಿಗೆ ತಂಪು ಪಾನಕ, ಮಜ್ಜಿಗೆ, ಮಾವಿನ ಹಣ್ಣಿನ ರಸ ವಿತರಣೆ ಮಾಡಿದರು. ಕಳೆದ ಮೂರ್ನಾಲ್ಕು ವರ್ಷದಿಂದ ಶೋಭಾಯಾತ್ರೆ ವೇಳೆ ಪಾನಕ ಮತ್ತು ನೀರಿನ ವ್ಯವಸ್ಥೆ ಮಾಡುತ್ತಿದ್ದೇನೆ. ಇದು ಸೌಹಾರ್ದತೆ ಗಟ್ಟಿಗೊಳಿಸುವ ಉತ್ಸವ ಎಂದರು.

ಕಡಕ್ ಬಿಸಿಲಿನಲ್ಲೂ ಬತ್ತದ ಉತ್ಸಾಹ: ಬೆಳಗ್ಗೆ 11ಕ್ಕೆ ಆರಂಭವಾದ ಶ್ರೀರಾಮನ ಬೃಹತ್ ಮೂರ್ತಿಯ ಭವ್ಯ ಶೋಭಾಯಾತ್ರೆ ರಾತ್ರಿವರೆಗೆ ನಡೆಯಿತು. ಮಧ್ಯಾಹ್ನದಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಟಿತ್ತು. ಇದರ ನಡುವೆಯೂ ಕಾರ್ಯಕ್ರಮದಲ್ಲಿ ಅಪಾರ ಜನಸ್ತೋಮ ಉತ್ಸಾಹದಿಂದ ಪಾಲ್ಗೊಂಡಿತ್ತು. ನಗರ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಬೈಕ್, ನಾಲ್ಕು ಚಕ್ರದ ವಾಹನ, ಬಸ್ ಮೂಲಕ ಆಗಮಿಸಿದ ಸಹಸ್ರಾರು ಯುವಕರು ಇಡೀ ದಿನ ಬಿರು ಬಿಸಿಲಿನ ತಾಪದ ಮಧ್ಯೆಯೇ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಒಂದು ಕಿಲೋಮೀಟರ್ ದೂರದಲ್ಲಿಯೇ ವಾಹನ ಪ್ರವೇಶ ನಿರ್ಬಂಧಿಸಿದ್ದರಿಂದ ಅಲ್ಲಿಂದಲೇ ನಡೆಯುತ್ತಲೇ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಮರಗಳ ಕೆಳಗೆ, ಅಂಗಡಿಗಳು, ಮನೆಗಳು, ಕಟ್ಟಡಗಳ ಮೇಲೆ ಮಹಿಳೆಯರು ನಿಂತು ಶೋಭಾ ಯಾತ್ರೆ ವೀಕ್ಷಣೆ ಮಾಡಿದರು. ವಿವಿಧೆಡೆ ಸ್ಥಳೀಯರು ಶ್ರೀರಾಮನ ಮೂರ್ತಿ ಮೇಲೆ ಪುಷ್ಪಾಲಂಕಾರ ಮಾಡಿ ಸ್ವಾಗತಿಸಿಕೊಂಡು ಭಕ್ತಿಭಾವ ಮೆರೆದರು.

ಬೆಳ್ಳಿ ಇಟ್ಟಿಗೆಯ ದರ್ಶನ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ಕೊಡುಗೆ ನೀಡಲು ನಿರ್ಧರಿಸಿದ 6 ಕೆಜಿಯ ಬೆಳ್ಳಿ ಇಟ್ಟಿಗೆಯನ್ನು ಶ್ರೀರಾಮ ನವಮಿ ಉತ್ಸವ ಸಮಿತಿಯಿಂದ ಪ್ರದರ್ಶನಕ್ಕೆ ಇಡಲಾಗಿತ್ತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರು ಇಟ್ಟಿಗೆ ದರ್ಶನ ಪಡೆದರು. ಶೋಭಾಯಾತ್ರೆಯ ನಂತರ ಇಟ್ಟಿಗೆಯನ್ನು ಅಯೋಧ್ಯೆ ರಾಮ ಮಂದಿರ ನಿರ್ಮಾಣ ಟ್ರಸ್ಟ್​ಗೆ ಕಳುಹಿಸಿಕೊಡಲಾಗುವುದು ಎಂದು ಸಂಘಟಕ ರಾಜು ಭವಾನಿ ತಿಳಿಸಿದರು.

ಗಮನ ಸೆಳೆದ ಕಲಾ ತಂಡಗಳು: ಶ್ರೀರಾಮನ ಭವ್ಯ ಮೂರ್ತಿಯ ಜತೆಗೆ ರಾಮತೀರ್ಥದಿಂದ ಬಂದ ಮೆರವಣಿಗೆಯಲ್ಲಿ ಉಡುಪಿಯು ಬೃಹತ್ ಕರಿ ಗೂಳಿ ಮತ್ತು ಅದರ ರಕ್ಷಕ ಗಮನ ಸೆಳೆದರು. ಇವೆರಡಕ್ಕೂ ಜನರು ಬಾಹುಬಲಿ ಚಿತ್ರದಲ್ಲಿ ಗೂಳಿ ಹಾಗೂ ಕಟ್ಟಪ್ಪನಿಗೆ ಹೋಲಿಕೆ ಮಾಡಿದರು. ಮಹಾ ಬಲವಂತ ಹನುಮಾನ ಮೂರ್ತಿಯೂ ಗಮನ ಸೆಳೆಯಿತು. ಹೆಗಲ ಮೇಲೆ ಲವ-ಕುಶರನ್ನು ಹೊತ್ತ ಹನುಮಂತ ಮತ್ತು ಗೂಳಿಯೊಂದಿಗೆ ಯುವಕರು ಮುಗಿಬಿದ್ದು ಸೆಲ್ಫಿ ತೆಗೆದುಕೊಂಡರು. ನಗರೇಶ್ವರದಿಂದ ರಾಜು ಭವಾನಿ ನೇತೃತ್ವದಲ್ಲಿ ಆರಂಭವಾದ ಶೋಭಾಯಾತ್ರೆಯಲ್ಲಿ ನಾಸಿಕ್ದ ಡೋಲಿನ ತಂಡ ಗಮನ ಸೆಳೆಯಿತು.

ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್: ಶೋಭಾಯಾತ್ರೆ ಮಾರ್ಗ ಸೇರಿದಂತೆ ನಗರದ ಎಲ್ಲೆಡೆ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎರಡೂ ಕಡೆಯಿಂದ ಆಗಮಿಸಿದ ಶೋಭಾಯಾತ್ರೆಯ ಭದ್ರತೆಗೆ 600 ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಕಮೀಷನರ್ ಡಾ.ರವಿಕುಮಾರ, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸುಲು, ಶ್ರೀಕಾಂತ ಕಟ್ಟಿಮನಿ, ಎಸಿಪಿಗಳಾದ ಗಿರೀಶ ಎಸ್.ಬಿ., ದೀಪನ್ ಎಂ.ಎನ್., ಜೆ.ಎಚ್.ಇನಾಮದಾರ್, ಶರಣಬಸಪ್ಪ, ಗಂಗಾಂಧರ ಮಠಪತಿ ಸೇರಿ ನೂರಾರು ಪೊಲೀಸ್ ಸಿಬ್ಬಂದಿ ಬಂದೋಬಸ್ತ್​ನಲ್ಲಿ ಪಾಲ್ಗೊಂಡಿದ್ದರು. ಬಿಸಿಲಿನ ಮಧ್ಯೆಯೇ ಹಿರಿಯ ಅಧಿಕಾರಿಗಳು ಮೂರ್ನಾಲ್ಕು ಗಂಟೆ ಸ್ವತಃ ರೋಡಿಗಿಳಿದು ಭದ್ರತಾ ವ್ಯವಸ್ಥೆ ಅವಲೋಕನ ನಡೆಸಿದರು. ಖಾದ್ರಿ ಚೌಕ್ ಸೇರಿ ಕೆಲ ಆಯಕಟ್ಟಿನ ಜಾಗದಲ್ಲಿ ಹೆಚ್ಚಿನ ಕಣ್ಣಿಡಲಾಗಿತ್ತು. ಅಲ್ಲಲ್ಲಿ ಡಿಎಆರ್, ಕೆಎಸ್ಆರ್ಪಿ ವ್ಯಾನ್ ತೈನಾತ್ ಮಾಡಲಾಗಿತ್ತು.

ಅಗಲಿದ ಚೇತನಗಳ ಸ್ಮರಣೆ: ನಾಡು, ಧರ್ಮ, ದೇಶ, ಸಂಸ್ಕೃತಿ ರಕ್ಷಣೆಗೆ ಕೊಡುಗೆ ನೀಡಿ ನಿಧನರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್, ಗಾನಕೋಗಿಲೆ ಲತಾ ಮಂಗೇಶ್ಕರ್, ನಟ ಪುನೀತ್ ರಾಜಕುಮಾರ, ಹಿಂದೂ ಕಾರ್ಯಕರ್ತ ಶಿವಮೊಗ್ಗದ ಹರ್ಷ, ಗೋ ರಕ್ಷಕ ಶಿವು ಉಪ್ಪಾರ ಅವರ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ವಿವಿಧೆಡೆ ಈ ಭಾವಚಿತ್ರಗಳು ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net