

ಕಲಬುರಗಿ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಕೆ.ಕೆ.ಅರ್.ಡಿ.ಬಿ., ಕಲಬುರಗಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ನಗರೇಶ್ವರ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಪ್ರದೇಶದ ಕಲೆ, ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಲಾ ತಂಡಗಳ ಭವ್ಯ ಮೆರವಣಿಗೆ ನಡೆಯಿತು.
ಕಲ್ಯಾಣ ಕರ್ನಾಟಕ ಪ್ರದೇಶ ಸೇರಿದಂತೆ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಧಾರವಾಡ, ವಿಜಯಪುರ ಹೀಗೆ ರಾಜ್ಯದ ಉತ್ತರ, ದಕ್ಷಿಣ ಹಾಗೂ ಪಶ್ಚಿಮ ಭಾಗದ 24 ಕಲಾ ತಂಡದ ಸುಮಾರು 200 ಕಲಾವಿದರ ಸಮಾಗಮವಾಗಲಿದ್ದು, ನಾಡಿನ ಸಿರಿವಂತಿಕೆಯ ಸಂಸ್ಕೃತಿಯ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ವಿಜಯನಗರದ ಮರಗಾಲು ಕುಣಿತ, ಮೈಸೂರಿನ ನಗಾರಿ, ಧಾರವಾಡದ ಜಗ್ಗಲಿಗೆ, ಮಂಡ್ಯದ ಪೂಜಾ ಕುಣಿತ, ಮದ್ದೂರಿನ ಪಟ ಕುಣಿತ, ವಿಜಯಪುರ ಸತ್ತಿಗೆ ಕುಣಿತ, ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ಕಲೆ ಜೊತೆಗೆ ಪ್ರದೇಶದ ಲಂಬಾಣಿ ನೃತ್ಯ, ಖಣಿಹಲಗಿ, ಹಲಗೆ ವಾದನ, ಡೊಳ್ಳು ಕುಣಿತ, ಚಿಟ್ಟಹಲಗೆ ಮೇಳ, ಹೆಜ್ಜೆ ಮೇಳ, ಚಿಲಿಪಿಲಿ ಗೊಂಬೆ, ಪುರವಂತಿಕೆ, ಮಹಿಳಾ ತಮಟೆ, ಚಂಡೆ ವಾದನ( ಸಿಂಗಾರಿ ಮೇಳ), ತಾಸೇರಾಮ ಡೋಲು, ಹಗಲು ವೇಶ ವರ್ಣರಂಜಿತ ಕಲಾ ಪ್ರದರ್ಶನ ಮೆರವಣಿಗೆಯ ಮೆರಗು ಹೆಚ್ಚಿಸಿತು.
ಸಾಂಸ್ಕೃತಿಕ ಕಾಲ ತಂಡಗಳ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಚಿತ್ರಣ ನೀಡುವ ಸ್ಥಬ್ಧಚಿತ್ರಗಳ ಪ್ರದರ್ಶನ ಸಹ ನಡೆಯಲಿದ್ದು, ಮೆರವಣಿಗೆಯ ಮೆರಗು ಹೆಚ್ಚಿಸಿತು.
ಸುಮಾರು 200 ಕಲಾವಿದರಿಂದ ನಾಡಿನ ಸಂಸ್ಕೃತಿ ಪರಿಚಯಿಸುವ ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಯಲ್ಲಿ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಜನತೆ, ಕಲಾರಸಿಕರು, ಕಲಾಭಿಮಾನಿಗಳು, ಸಾಹಿತ್ಯಾಸಕ್ತರು, ಶಾಲಾ-ಕಾಲೇಜು ಮಕ್ಕಳು ಭಾಗವಹಿಸಿದ್ದರು.
ಮೆರವಣಿಗೆಗೆ ಸಂಸದ ಡಾ.ಉಮೇಶ್ ಜಾಧವ್, ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಡಿಸಿ ಯಶವಂತ ಗುರುಕರ್, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಸೇರಿದಂತೆ ಗಣ್ಯರು ಚಾಲನೆ ನೀಡಿದರು. ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.