

ಕಲಬುರಗಿ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ ಕರೊನಾ ಮಹಾಸ್ಫೋಟ ಸಂಭವಿಸಿದ್ದು, 159 ಪಾಸಿಟಿವ್ ಪ್ರಕರಣ ದೃಢಪಟ್ಟಿವೆ. ಅಲ್ಲದೆ ಇಂದು ಐವರು ಮೃತಪಟ್ಟಿದ್ದು, ಸಾರ್ವಜನಿಕರಲ್ಲಿ ಕೋವಿಡ್ ಭಯ ಇನ್ನಷ್ಟು ಹೆಚ್ಚಾಗಿದೆ.ಇಂದಿನ 5 ಜನರ ಸಾವು ಸೇರಿ ಇದುವರೆಗೆ 54 ಸೋಂಕಿತರು ಮತಪಟ್ಟಿದ್ದಾರೆ. 26 ಜನ ಚೇತರಿಸಿಕೊಂಡಿದ್ದೂ ಸೇರಿ 1921 ಜನ ಗುಣ ಹೊಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಂದಿನ 159 ಸೇರಿ ಸೋಂಕಿತರ ಸಂಖ್ಯೆ 3529ಕ್ಕೇರಿದ್ದು, ಸೋಂಕಿನ ವಿಷಯದಲ್ಲಿ ಜಿಲ್ಲೆ ರಾಜ್ಯದಲ್ಲಿ ಮೂರನೇ ಸ್ಥಾನಕ್ಕೇರಿದಂತಾಗಿದೆ. 1554 ಸಕ್ರಿಯ ಪ್ರಕರಣಗಳಿವೆ. ಐಸಿಯುದಲ್ಲಿ 29 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಪತ್ತೆಯಾಗಿರುವ ಸೋಂಕಿತರನ್ನು ಕೋವಿಡ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಮೃತರ ಸಂಖ್ಯೆ 54ಕ್ಕೆ ಏರಿಕೆ
ಕರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಇಬ್ಬರು ವೃದ್ಧರು ಸೇರಿದಂತೆ ಮತ್ತೆ 5 ಜನ ನಿಧನ ಹೊಂದಿದ್ದು, ಇದರಿಂದ ಮೃತರಾದವರ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಮಾಹಿತಿ ನೀಡಿದರು.
ತೀವ್ರ ಉಸಿರಾಟದ ತೊಂದರೆ ಜತೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಹುಸೇನ್ ಗಾರ್ಡನ್ ಪ್ರದೇಶದ 57 ವರ್ಷದ ಪುರುಷ (ಪಿ-52561) ಜು.5 ರಂದು ಆಸ್ಪತ್ರೆಗೆ ದಾಖಲಾಗಿ 9ರಂದು ಮೃತಪಟ್ಟಿದ್ದ. ಇನ್ನು ಶಹಾಬಾದ್ ತಾಂಡಾದ 73 ವರ್ಷದ ವೃದ್ಧ (ಪಿ-57319) ಜು.7 ರಂದು ಆಸ್ಪತ್ರೆಗೆ ದಾಖಲಾಗಿ ಜು.11 ರಂದು ಮೃತರಾಗಿದ್ದಾರೆ.ತೀವ್ರ ಉಸಿರಾಟ ತೊಂದರೆ ಜತೆಗೆ ಮಧುಮೇಹದಿಂದ ಬಳಲುತ್ತಿದ್ದ ಶೇಖ್ ಕಾಲನಿ (ಅಜಾದಪೂರ್ ರಸ್ತೆ) ಪ್ರದೇಶದ 37 ವರ್ಷದ ಮಹಿಳೆ (ಪಿ-57409) 11 ರಂದು ಆಸ್ಪತ್ರೆಗೆ ದಾಖಲಾಗಿ 12 ರಂದು ಕೊನೆ ಉಸಿರೆಳೆದಿದ್ದಾರೆ. ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಚಿಂಚೋಳಿ ತಾಲೂಕಿನ ಸಲಾರ ಬಸಂತಪುರದ 40 ವರ್ಷದ ಪುರುಷ (ಪಿ-60678) 16ರಂದು ಮನೆಯಲ್ಲಿಯೇ ಮೃತರಾಗಿದ್ದು, ಶುಕ್ರವಾರ ಸೋಂಕು ತಗುಲಿರುವುದು ದೃಢವಾಗಿದೆ. ತೀವ್ರ ಉಸಿರಾಟ ತೊಂದರೆ ಜತೆಗೆ ಮಧುಮೇಹದಿಂದ ಬಳಲುತ್ತಿದ್ದ ನಗರದ ಮೆಕ್ಕಾ ಕಾಲನಿ ಪ್ರದೇಶದ 70 ವರ್ಷದ ವೃದ್ಧ (ಪಿ-68131) 17 ರಂದು ಆಸ್ಪತ್ರೆಗೆ ದಾಖಲಾಗಿ, 18ರಂದು ನಿಧನರಾಗಿದ್ದಾರೆ.
ವೆಂಟಿಲೇಟರ್ ಸಿಗದೆ ವ್ಯಕ್ತಿ ಸಾವು
ವಾಡಿ: ಕಲಬುರಗಿ ಜಿಮ್ಸ್ ಸೇರಿ ಇತರ ಆಸ್ಪತ್ರೆಗಳಿಗೆ ಅಲೆದಾಡಿದರೂ ವೆಂಟಿಲೇಟರ್ ಸಿಗದೆ ವ್ಯಕ್ತಿಯೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.ಪಟ್ಟಣದ ಇರಾನಿ ಬಡಾವಣೆ ವ್ಯಕ್ತಿ ಮೃತಪಟ್ಟವ. ಲಾರಿ ಚಾಲಕನಾಗಿದ್ದು, ಅನಾರೋಗ್ಯದಿಂದ ಜಿಮ್ಸ್ಗೆ ದಾಖಲಾಗಿದ್ದ. 17ರಂದು ಗಂಟಲ ದ್ರವ ಪರೀಕ್ಷೆ ನಡೆಸಿದ್ದು, 22ರಂದು ಪಾಸಿಟಿವ್ ದೃಢಪಟ್ಟಿತ್ತು. ಆದರೆ ಕಿಡ್ನಿ ವೈಫಲ್ಯ ಕಂಡು ಬಂದಿದ್ದರಿಂದ ಜಿಮ್ಸ್ ಆಸ್ಪತ್ರೆ ವೈದ್ಯರು ನಮ್ಮಲ್ಲಿ ವೆಂಟಿಲೇಟರ್, ಡಯಾಲಿಸಿಸ್ ಸೌಕರ್ಯ ಇಲ್ಲ. ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಗುರುವಾರ ಮಧ್ಯಾಹ್ನದಿಂದ ಹಲವಾರು ಖಾಸಗಿ ಆಸ್ಪತ್ರೆಗಳಿಗೆ ಅಲೆದರೂ ವೆಂಟಿಲೇಟರ್ ಇರದಿರುವುದರಿಂದ ದಾಖಲಿಸಿಕೊಂಡಿಲ್ಲ. ಹೀಗಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.