ಕಲಬುರಗಿಯಲ್ಲಿ 46ಡಿಗ್ರಿ ಸೆಲ್ಸಿಯಸ್ ದಾಖಲು

dt_200330_heat_wave_thermometer_800x450
Published on

ಕಲಬುರಗಿ: ಜಿಲ್ಲೆಯಲ್ಲಿ ಸೋಮವಾರ ರಣಬಿಸಿಲಿನ ಅಬ್ಬರದಿಂದಾಗಿ ಜನತೆ ತತ್ತರಿಸಿ ಹೋದರು. ಲಭ್ಯವಾದ ಮಾಹಿತಿ ಪ್ರಕಾರ ಇಂದು
ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಸರಿ ಸುಮಾರು 46 ಡಿಗ್ರಿ ಸೆಲ್ಸಿಯಸ್ನಷ್ಟಿತ್ತೆಂದು ಹೇಳಲಾಗುತ್ತಿದೆ. ಈ ಸಲದ ಬೇಸಿಗೆಯಲ್ಲಿ ಇದು ಅತ್ಯಂತ ಹೆಚ್ಚಿನ ಬಿಸಿಲೆಂದು ದಾಖಲಾಗಿದೆ.
ನಗರದಲ್ಲಿ ಇಂದು ಬಿಸಿಲಿನ ತಾಪದಿಂದಾಗಿ ಎಲ್ಲೆಡೆ ಬಿಸಿಗಾಳಿ ಬೀಸುತ್ತಿತ್ತು. ಇದರಿಂದ ಮಕ್ಕಳು, ವೃದ್ಧರು ಸೇರಿ ಜನತೆ ತತ್ತರಿಸುವಂತಾಯಿತು. ಮೊದಲೇ ಜಿಲ್ಲೆಯಲ್ಲಿ ಕರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಇದಕ್ಕೆ ಸ್ಪರ್ಧೆಯಾಗಿ ಬಿಸಿಲು ಜನರಿಗೆ ಬಿಸಿ ಮುಟ್ಟಿಸುತ್ತಿದೆ.
ಸೋಮವಾರ ಬೆಳಗ್ಗೆಯಿಂದಲೇ ಬಿಸಿಲಿನ ಪ್ರಖರತೆ ಕಂಡು ಬಂದಿತು. ಮಧ್ಯಾಹ್ನದ ವೇಳೆಗೆ ನೆಲ ಕಾದ ಹಂಚಿನಂತಾಗಿತ್ತು. ಸಂಜೆಯಾದರೂ ಪ್ರಖರತೆ ತಗ್ಗಿರಲಿಲ್ಲ. ವಿಪರೀತ ಸೆಕೆ ಮತ್ತು ಬೆವರು ಜನರನ್ನು ಕಂಗಾಲಾಗುವಂತೆ ಮಾಡಿತ್ತು. ಬೇಸಿಗೆ ಮುಗಿಯಲು ಏನಿಲ್ಲವೆಂದರೂ ಇನ್ನು ಹದಿನೈದು ದಿನಗಳಿದ್ದು, ಬಿಸಿಲಿನ ಪ್ರಮಾಣ ಇನ್ನೂ ಹೆಚ್ಚಾಗಬಹುದೆಂದು ಹೇಳಲಾಗುತ್ತಿದೆ.
ಅಬ್ಬರದ ಬಿಸಿಲಿನಿಂದ ರಕ್ಷಣೆ ಪಡೆದುಕೊಳ್ಳಲು ಮನೆಯಲ್ಲಿರುವ ಜನತೆ ಫ್ಯಾನ್ಗಳಿಗೆ ಮೊರೆ ಹೋದರು. ಫ್ಯಾನ್ಗಳಿಂದಲೂ ಗಾಳಿ ಬಿಸಿಯಾಗಿಯೇ ಬರುತ್ತಿತ್ತು. ಹೀಗಾಗಿ ಎಲ್ಲಿ ಕುಳಿತರೂ ಸಮಾಧಾನ ಇಲ್ಲವೆನ್ನುವಂಥ ವಾತಾವರಣ ಸೃಷ್ಟಿಯಾಗಿತ್ತು.
ವಿಪರೀತಿ ಬಿಸಿಲಿನ ತಾಪವಿದ್ದಾಗ ನೆಲಕ್ಕೆ ನೀರು ಹೊಡೆಯಬೇಕೆಂದು ಹೇಳಲಾಗುತ್ತಿದೆ. ಆದರೆ ಕಲಬುರಗಿ ಮಹಾನಗರ ಪಾಲಿಕೆ
ಅಂತಹ ಕ್ರಮಕ್ಕೆ ಮುಂದಾಗಲಿಲ್ಲ. ಬಿಸಿಲಿನ ಜತೆ ನಗರದ ಹಲವಾರು ಬಡಾವಣೆಗಳಲ್ಲಿ ನೀರಿನ ಕೊರತೆ ಸಹ ಎದ್ದು ಕಂಡಿತು. ಕೆಲವು ಕಡೆ ನಿಜಕ್ಕೂ ನೀರಿನ ಸಮಸ್ಯೆ ಇದ್ದರೆ ಇನ್ನೂ ಕೆಲವು ಕಡೆ ನಗರ ನೀರು ಸರಬರಾಜು ಮಂಡಳಿ ಸಿಬ್ಬಂದಿ ನಿರ್ಲಕ್ಷೃತನದಿಂದಾಗಿ ಕೃತಕ ಅಭಾವ ಕಂಡು ಬಂದಿತು. ಒಟ್ಟಾರೆ ಇದೆಲ್ಲದರ ಬಿಸಿ ಜನತೆಗೆ ತಟ್ಟಿದ್ದಂತೂ ನಿಜ.
ಬಾಕ್ಸ್
ಗಾಬರಿ ಮೂಡಿಸಿದ ವೆಬ್ಸೈಟ್
ಸರಿಯಾದ ಅಂಕಿ-ಅಂಶವನ್ನು ವೆಬ್ಸೈಟ್ ಕೊಡುತ್ತದೆ ಎಂದು ಬಹುತೇಕ ಜನತೆ ನಂಬುತ್ತಾರೆ. ಸೋಮವಾರ ಬಿಸಿಲಿನ ಪ್ರಮಾಣ ವೆಬ್ಸೈಟ್ನಲ್ಲಿ ಸರಿಯಾಗಿ ದಾಖಲಾಗಲಿಲ್ಲ. ಇನ್ನು ಹವಾಮಾನ ಇಲಾಖೆಯವರಂತೂ ತಾವಾಗಿಯೇ ತಿಳಿದು ಬಿಸಿಲು ಮತ್ತು ಮಳೆಯ ಪ್ರಮಾಣ ತಿಳಿಸುವ ಗೋಜಿಗೆ ಹೋಗುವುದೇ ಇಲ್ಲ. ಹೀಗಾಗಿ ಜನತೆಗೆ ಸ್ಪಷ್ಟ ಮಾಹಿತಿ ಸಿಗುವುದೂ ಕಷ್ಟವಾಗಿ ಅವರೇ ತಮ್ಮದೇ ಆದ ರೀತಿಯಲ್ಲಿ ಬಿಸಿಲಿನ ಪ್ರಮಾಣದ ಬಗ್ಗೆ ಲೆಕ್ಕ ಹಾಕುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net