

ಕಲಬುರಗಿ: ಕಳೆದ ಒಂದು ವರೇ ವರ್ಷದಿಂದ ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್, ಪಾಲಿಕೆ ಸ್ಥಾಯಿ ಸಮಿತಿಗಳಿಗೆ ಸದಸ್ಯರ ನೇಮಕ ಚುನಾವಣೆಗೆ ಕಾಲ ಕೂಡಿ ಬಂದಿದ್ದು, ಇದೇ 23ರಂದು ಗುರುವಾರ ಚುನಾವಣೆಯ ನಡೆಯಲಿದೆ. ಇದರ ಹಿನ್ನೆಲೆಯಲ್ಲಿ ಕಲಬುರಗಿ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಉಪ ಪೊಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು ಆದೇಶ ಹೊರಡಿಸಿದ್ದಾರೆ.
ನಗರದ ಇಂದಿರಾ ಭವನದಲ್ಲಿ ಗುರುವಾರ ಚುನಾವಣೆ ನಡೆಯಲಿದ್ದು, ಭವನದ ಸುತ್ತ 200 ಮೀಟರ್ ನಿಷೇಧಾಜ್ಱಎ ಜಾರಿ ಮಾಡಿ, ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನ ಓಡಾಟ ಮಾಡಬಾರದು. ಮೆರವಣಿಗೆ, ಸಭೆ ನಡೆಸಬಾರದು, ಶಸ್ತ್ರ, ದೊಣ್ಣೆ, ಕತ್ತಿ, ಈಟಿಗಳನ್ನು ಒಯ್ಯಬಾರದು, ಸ್ಫೋಟಕ ವಸ್ತು ಡಿಡಿಸಬಾರದು, ವ್ಯಕ್ತಿ ಅಥವಾ ಶವಗಳ ಪ್ರತಿಕೃತಿ ಪ್ರದರ್ಶನ ಮಾಡುವುದು ನಿಷೇಧಿಸಲಾಗಿದೆ.
ನಾಮನಿರ್ದೇಶಿತ ವಿಧಾನ ಪರಿಷತ್ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಮಂಗಳವಾರ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ ಕೋರ್ಟ್ ಚುನಾವಣೆ ಪ್ರಕ್ರಿಯೆಗೆ ತಡೆ ನೀಡದೆ ಇರುವುದರಿಂದ ಗುರುವಾರ ಚುನಾವಣೆ ನಡೆಯುವುದು ಖಚಿತವಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ.