ಕಲಬುರಗಿಯ ರಾಹುಲ್ ಗಾಂಧಿ ಪ್ರಿಯಾಂಕ್​ ಖರ್ಗೆ

2402 klb 01
Published on

ಕಲಬುರಗಿ: ಪ್ರಸಕ್ತ ವರ್ಷ ನಡೆಯುವ ಲೋಕಸಭಾ ಚುನಾವಣೆಯೂ ಮೋದಿ, ಬಿಜೆಪಿಗಾಗಿ ಅಲ್ಲ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಇದೆ. ಚುನಾವಣೆಯಲ್ಲಿ ಮೋದಿ ಗೆಲ್ಲದಿದ್ದರೆ ಭವಿಷ್ಯದಲ್ಲಿ ರಕ್ಷಣೆಯೇ ಇಲ್ಲ ಎಂದು ಲೋಕಸಭೆ ಚುನಾವಣೆ ಉಸ್ತುವಾರಿ ರಾಜುಗೌಡ ನಾಯಕ ಹೇಳಿದರು.

ನಗರದಲ್ಲಿ ಬಿಜೆಪಿ ಲೋಕಸಭೆ ಚುನಾವಣೆ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಇತಿಹಾಸವೇ ಇದೆ. ಉತ್ತಮ ತಂಡವಿದ್ದು, ಕಾರ್ಯಕರ್ತರು, ಜನಸಾಮಾನ್ಯರು ಮೋದಿಯನ್ನು ಗೆಲ್ಲಿಸಲು ದೃಢ ಸಂಕಲ್ಪ ಮಾಡಿದ್ದಾರೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದವರು ಕಾರ್ಯಕರ್ತರನ್ನು ಅಂಜಿಸುವ, ಬೆದರಿಸುತ್ತಿದ್ದು, ಅದನ್ನು ಎದುರಿಸಲು ಎಲ್ಲದಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಬಿಜೆಪಿಯ ಸ್ಟಾರ್ ಕ್ಯಾಂಪೆನರ್ ರಾಹುಲ್ ಗಾಂಧಿ ೪೦೦ ಸೀಟ್ ತರುತ್ತಾರೆ. ಕಲಬುರಗಿ ಲೋಕಸಭೆ ಕ್ಷೇತ್ರದಲ್ಲಿ ನಾವು ೧.೫ ಲಕ್ಷ ಲೀಡ್ ಗುರಿ ಇಟ್ಟುಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅದಕ್ಕೆ ೫೦ ಸಾವಿರ ಹೆಚ್ಚಿಸುತ್ತಾರೆ. ಎಲ್ಲ ಖಾತೆಗೆ ಅಡ್ಡ ಬರುವ, ನಾನೊಬ್ನೆ ಸಚಿವ, ನಾನೇ ಎಲ್ಲ ಅನ್ನೋದು ಪ್ರಿಯಾಂಕ್ ಖರ್ಗೆ ತಲೆಯಲ್ಲಿದೆ. ಅವರ ಹೆಣ ಕೂಡ ಬಿಜೆಪಿಗೆ ಬರಲ್ಲ ಎಂದು ಪ್ರಿಯಾಂಕ್ ಹೇಳ್ತಾರೆ. ಬಿಜೆಪಿಯಲ್ಲಿ ನಾನೊಬ್ಬನೇ ಇದ್ದರೂ ಇಂತಹ ಹಿಂದೂ ವಿರೋಧಿಗಳನ್ನು ಸೇರಿಸಿಕೊಳ್ಳಲ್ಲ ಎಂದು ರಾಜುಗೌಡ ವ್ಯಂಗ್ಯವಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ, ಪದಾಧಿಕಾರಿಗಳ ಬದಲಾವಣೆ ನಿರಂತರ ಪ್ರಕ್ರಿಯೆ. ಹಳಬರು ಹೊಸಬರಿಗೆ ಅವಕಾಶ ನೀಡಿ, ಮಾರ್ಗದರ್ಶನ ಮಾಡಬೇಕು. ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.

ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಈಗಾಗಲೇ ಸಮೀಕ್ಷೆಯಲ್ಲಿ ಬಿಜೆಪಿಗೆ ೩೭೦ ಸೀಟ್ ಬರುವುದು ನಿಶ್ಚಿತವಾಗಿದ್ದು, ಎನ್‌ಡಿಎ ಒಕ್ಕೂಟ ೪೦೦ರ ಗಡಿ ದಾಟಲಿದೆ. ಕಲಬುರಗಿ ಗೆಲುವು ಸುಲಭವಲ್ಲ. ಗೆಲುವು ನಿಶ್ಚಿತವಾಗಿದೆ. ಆದರೆ ಸುಮ್ಮನೇ ಕೂಡುವಂತಿಲ್ಲ. ಜಿಲ್ಲೆಯಲ್ಲಿ ಪಕ್ಷದ ಚಟುವಟಿಕೆಗಳ ಪ್ರತಿ ವರದಿ ಹೋಗುತ್ತಿವೆ ಎಂದರು.

ವಿಭಾಗೀಯ ಪ್ರಭಾರಿ ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಎರಡು ಲಕ್ಷ ಮತದಿಂದ ಬಿಜೆಪಿಯನ್ನು ಗೆಲ್ಲಿಸಬೇಕು. ಹಗಲು ರಾತ್ರಿ ಕೆಲಸ ಮಾಡೋಣ. ವಿಧಾನಸಭೆ ಚುನಾವಣೆಯಲ್ಲಿನ ಹಿನ್ನಡೆ ಮರೆತು, ಕಾಂಗ್ರೆಸ್ ಅಭ್ಯರ್ಥಿ ಯಾರೇ ಆಗಿದ್ದರೂ ಹೆದರದೆ ಬಿಜೆಪಿ ಗೆಲ್ಲಿಸೋಣ ಎಂದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಸ್ವಾಗತಿಸಿದರು. ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಅರುಣ ಭಿನ್ನಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಲೋಕಸಭಾ ಚುನಾವಣಾ ಸಂಚಾಲಕಿ ಶೋಭಾ ಭಾಣಿ, ಉಪ ಮೇಯರ ಶಿವಾನಂದ್ ಪಿಸ್ತಿ, ಬಸವರಾಜ ಮುತ್ತಿ, ಉಮೇಶ ಪಾಟೀಲ್, ಮಹಾದೇವ ಬೆಳಮಗಿ, ಅಶೋಕ ಬಗಲಿ, ಶಶಿಕಲಾ ಟೆಂಗಳಿ, ಧರ್ಮಣ್ಣ ಇಟಗಾ, ಡಾ.ಅಂಬಾರಾಯ ಅಷ್ಟಗಿ, ನಾಗಬಸವ ಕೊಳ್ಳಿ, ಅಶೋಕ ಬಗಲಿ, ಶಿವಯೋಗಿ ನಾಗನಳ್ಳಿ, ಶ್ರೀನಿವಾಸ ದೇಸಾಯಿ, ಬಾಬುರಾವ ಹಾಗರಗುಂಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net