

ಕಲಬುರಗಿ: ಸೆಕೆಂಡ್ ಹ್ಯಾಂಡ್ ಕಾರ್ ವ್ಯಾಪಾರಿ ಅರ್ಜುನಪ್ಪ ಮಡಿವಾಳಗೆ ಮಾರಣಾಂತಿಕ ಹಲ್ಲೆ ಖಂಡಿಸಿ, ಜಿಲ್ಲೆಯಲ್ಲಿ ಗುಂಡಾ ಆಡಳಿತಕ್ಕೆ ಕಡಿವಾಣ ಹಾಕಲು ಆಗ್ರಹಿಸಿ ನಗರದಲ್ಲಿ ಹಿಂದು ಜಾಗೃತಿ ಸೇನೆ, ನವ ಕಲ್ಯಾಣ ಕರ್ನಾಟಕ ಮಡಿವಾಳ ಸಂಘ ಸೇರಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ, ಗುಂಡಾ ಆಡಳಿತಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ಮಡಿವಾಳ ಸಮುದಾಯದವರು, ನಗರದ ವಿವಿಧ ಹಿಂದು ಸಂಘಟನೆಗಳು, ಸಾರ್ವಜನಿಕರು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ಸಂಚಾರ ತಡೆದು, ಹಲ್ಲೆಕೋರರ ಭಾವಚಿತ್ರಗಳನ್ನು ಹಿಡಿದು ಕಿಡಿ ಕಾರಿದರು. ಜಿಲ್ಲಾಡಳಿತಕ್ಕೆ ಧಿಕ್ಕಾರ'ಜಿಲ್ಲಾ ಉಸ್ತುವಾರಿ ಸಚಿವರಿಗೆ ಧಿಕ್ಕಾರ' `ಗೂಂಡಾ ರಾಜ್‌ಗೆ ಧಿಕ್ಕಾರ, ಪೊಲೀಸ್ ವೈಫಲ್ಯಕ್ಕೆ ಧಿಕ್ಕಾರ ಕೂಗಿದರು.
ಪೈಶಾಚಿಕ ಕೃತ್ಯ ನಡೆದರೂ ಜಿಲ್ಲಾಡಳಿತ ನೊಂದವರ ನೆರವಿಗೆ ಬರುತ್ತಿಲ್ಲ. ಜಿಲ್ಲೆ ಸೇರಿ ನಗರದಲ್ಲಿ ಪೊಲೀಸ್ ಇಲಾಖೆ ಜೀವಂತವಿದೆಯೇ? ಅತ್ಯಂತ ಹೀನ, ಪೈಶಾಚಿಕ ಕೃತ್ಯ ನಡೆಸುವ ಹಂತಕ್ಕೆ ಕಿಡಿಗೇಡಿಗಳು ಇಳಿದಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಕೆಲ ದಿನಗಳಿಂದ ಪದೇ ಪದೆ ದೌರ್ಜನ್ಯ ನಡೆಯುತ್ತಿವೆ. ಪೊಲೀಸರು ಇದಕ್ಕೆ ಕಡಿವಾಣ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವ ಕಲ್ಯಾಣ ಕರ್ನಾಟಕ ಮಡಿವಾಳರ ಸಂಘದ ಅಧ್ಯಕ್ಷ ಸಿ.ನಂಜಪ್ಪ, ಜಿಲ್ಲಾಧ್ಯಕ್ಷ ರುಕ್ಮಣ್ಣ ಮಡಿವಾಳ ಬೇನೂರು ಮಾತನಾಡಿದರು. ಹಿಂದು ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷಿö್ಮÃಕಾಂತ ಸ್ವಾದಿ, ರವಿ ಶಹಾಪುರಕರ್, ಸುನೀಲ ಶಿರ್ಕೆ, ರಾಜು ಸ್ವಾಮಿ, ಸಿದ್ದು ಕಂದಗಲ್, ದಶರಥ ಇಂಗೋಳೆ, ಮಹಾದೇವ ಕೋಟನೂರ, ರಾಜು ಕಮಲಾಪುರೆ, ಬಾಬುರಾವ ಹಾಗರಗುಂಡಗಿ, ನಾಗಲಿಂಗಯ್ಯ ಮಠಪತಿ, ಮಾಲಾ ಕಣ್ಣಿ, ಸತೀಶ ಮಾಹೂರ, ಸಿದ್ದರಾಜ ಬಿರಾದಾರ, ವಿಜಯಕುಮಾರ ಮಡಿವಾಳ, ನಾಗೇಶ ವಿ.ತರನಳ್ಳಿ, ಬಸವರಾಜ ಮಡಿವಾಳ, ಮಲ್ಲಿಕಾರ್ಜುನ ಸಾರವಾಡ, ಈರಣ್ಣ ಹಡಪದ, ಅಂಬಾರಾಯ ಬೆಳಕೋಟ ಇತರರಿದ್ದರು.