

ಕಲಬುರಗಿ: ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಸೇರಿ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ ವಿವಿಧ ಮಠಗಳಲ್ಲಿ ಶ್ರಾವಣ ಅಮಾವಾಸ್ಯೆ ನಿಮಿತ್ತ ಆ.೧೬ ಮತ್ತು ಆ.೨೧ರಂದು ಶಿವಾನುಭವ ಚಿಂತನಾ ಗೋಷ್ಠಿ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ವಿಶ್ವಾರಾಧ್ಯ ಸೇವಾ ಸಮಿತಿ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ತಿಳಿಸಿದ್ದಾರೆ.
೧೬ರಂದು ಯಾದಗಿರಿ ತಾಲೂಕಿನ ಅಬ್ಬೆತುಮಕೂರು ಮಠದಲ್ಲಿ ೪೫೯ನೇ ಶಿವಾನುಭವ ಚಿಂತನೆ ಹಾಗೂ ೨೧ರಂದು ಶಹಾಪುರ ತಾಲೂಕಿನ ಅಪ್ಪನ ಶಾಖಾಪುರ ವಿಶ್ವಾರಾಧ್ಯ ಮಠದಲ್ಲಿ ೨೭೬ನೇ ಶಿವಾನುಭವ ಗೋಷ್ಠಿ ನಡೆಯಲಿದೆ. ಉಭಯ ಕಾರ್ಯಕ್ರಮಗಳಲ್ಲಿ ಅಬ್ಬೆತುಮಕೂರದ ಶ್ರೀ ಡಾ. ಗಂಗಾಧರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.
೧೬ರಂದು ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿಯ ಚಿಕ್ಕ ವೀರೇಶ್ವರ ಹಿರೇಮಠದಲ್ಲಿ ಶ್ರೀ ರೇವಣಸಿದ್ಧ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ೨೯೪ನೇ ಚಿಂತನೆ ಗೋಷ್ಠಿ, ಜೇವರ್ಗಿ ತಾಲೂಕಿನ ಶಖಾಪುರ ತಪೋವನ ಮಠದಲ್ಲಿ ಶ್ರೀ ಸಿದ್ಧರಾಮ ಶಿವಾಚಾರ್ಯರ ನೇತೃತ್ವದಲ್ಲಿ ೩೪೯ನೇ ಶಿವಾನುಭವ ಚಿಂತನೆ ಜರುಗಲಿದೆ. ಶಿವಾನುಭವ ಚಿಂತನೆ ನಂತರ ರಾತ್ರಿ ಇಡೀ ಭಜನೆ, ವಚನ ಗಾಯನ, ಸಂಗೀತ ಸಭೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.