ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ36,107 ಕಟ್ಟಡ ತೆರಿಗೆ ವ್ಯಾಪ್ತಿಗಿಲ್ಲ

BG Patil
ವಿಧಾನ ಪರಿಷತ್​ ಸದಸ್ಯ ಡಾ.ಬಿ.ಜಿ.ಪಾಟೀಲ್​.
Published on

ಕಲಬುರಗಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ನಿಯಮಗಳಡಿ ಗ್ರಾಮ ಪಂಚಾಯಿತಿಗಳು ತೆರಿಗೆ, ದರ ಮತ್ತು ಶುಲ್ಕಗಳನ್ನು ವಿಧಿಸಿ ಸಂಪನ್ಮೂಲ ಕ್ರೋಢೀಕರಿಸಲು ಸೂಚನೆ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಅವರ ಪ್ರಶ್ನೆಗೆ ಉತ್ತಿರಿಸಿದ ಅವರು, ಕಲಬುರಗಿ-ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 36,107 ಕಟ್ಟಡಗಳು ತೆರಿಗೆಗೆ ಒಳಪಡುವುದಿಲ್ಲ. ಕಲಬುರಗಿಯಲ್ಲಿ 27,130 ವಸತಿಯೇತರ, 2545 ವಾಣಿಜ್ಯ, 12 ಕೈಗಾರಿಕೆ ಹಾಗೂ ಯಾದಗಿರಿಯಲ್ಲಿ 4129 ವಸತಿಯೇತರ, 1892 ವಾಣಿಜ್ಯ, 399 ಕೈಗಾರಿಕೆ ಕಟ್ಟಡಗಳಿವೆ ಎಂದು ಮಾಹಿತಿ ನೀಡಿದರು.

ತೆರಿಗೆ ವ್ಯಾಪ್ತಿಗೆ ಒಳಪಡದ ಕಟ್ಟಡಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಎಲ್ಲ ಭೂಮಿ, ಕಟ್ಟಡಗಳ ಸಮಗ್ರ ಸಮೀಕ್ಷೆ ನಡೆಸಿ, ಆಸ್ತಿ ಮತ್ತು ತೆರಿಗೆ ನಮೂನೆಯಲ್ಲಿ ಆಸ್ತಿ ವಿವರಗಳನ್ನು ದಾಖಲಿಸಲಾಗುತ್ತಿದೆ. ಬಳಿಕ ತೆರಿಗೆ ಲೆಕ್ಕಾಚಾರ ಮಾಡಿ, ನಮೂನೆ-9(ಎ) ವಹಿಯಲ್ಲಿ ನಮೂದಿಸಲು ತಿಳಿಸಲಾಗಿದೆ. ಪ್ರಸ್ತುತ ರಾಜ್ಯದ ಪ್ರತಿ ಗ್ರಾಪಂಗಳಲ್ಲಿ ಮ್ಯಾನ್ಯುವೆಲ್ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ತೆರಿಗೆಗೆ ಒಳಪಡದ ಎಲ್ಲ ಭೂಮಿ ಮತ್ತು ಕಟ್ಟಡಗಳಿಗೆ ಪಂಚತAತ್ರ 2.0 ತಂತ್ರಾಂಶದ ಮೂಲಕ ತೆರಿಗೆ ವಿಧಿಸಿ, ವಸೂಲಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತೆರಿಗೆ ಪಾವತಿಸಲು ಆಸ್ತಿಯ ಮಾಲೀಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಶ್, ಯುಪಿಐ, ಪಿಒಎಸ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಚೆಕ್, ಡಿಡಿ, ಇಂಟರ್‌ನೆಟ್ ಬ್ಯಾಂಕಿAಗ್, ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೇಜಾನ್ ಪೇ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net