ಕಲಬುರಗಿ ಮಾರ್ಗವಾಗಿ ಬೆಂಗಳೂರಿಗೆ ರೈಲು

Capture2
Published on

ಬೀದರ್: ಜಿಲ್ಲೆಯ ಜನರ ಬಹು ದಿನದ ಬೇಡಿಕೆಯಾಗಿದ್ದ ಬೀದರ್-ಯಶವಂತಪುರ (ಬೆಂಗಳೂರು) ರೈಲು ಕಲಬುರಗಿ ಮಾರ್ಗವಾಗಿ ಚಲಿಸಬೇಕೆಂಬ ಕನಸು ಸಾಕಾರಗೊಂಡಿದೆ.
ರೈಲ್ವೆ ಸಚಿವಾಲಯವು ಯಶವಂತಪುರ-ಬೀದರ್ (16571), ಬೀದರ್-ಯಶವಂತಪುರ (16572) ರೈಲನ್ನು ವಾಯಾ ಕಲಬುರಗಿ ಓಡಿಸಲು ಸೋಮವಾರ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಈ ರೈಲು ಕಲಬುರಗಿ ಮಾರ್ಗವಾಗಿ ವಾರದಲ್ಲಿ ನಾಲ್ಕು ದಿನ ಚಲಿಸಲಿದೆ. ರೈಲು ಸಂಖ್ಯೆ 16571 ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ಯಶವಂತಪುರದಿಂದ ರಾತ್ರಿ 7ಕ್ಕೆ ಹೊರಟು ವಾಯಾ ಸುಲಹಳ್ಳಿ, ವಾಡಿ, ಕಲಬುರಗಿ, ತಾಜಸುಲ್ತಾನಪುರ, ಕಮಲಾಪುರ, ಹುಮನಾಬಾದ್, ಹಳ್ಳಿಖೇಡ್(ಬಿ) ಮಾರ್ಗವಾಗಿ ಬೀದರ್ಗೆ ಮರು ದಿನ ಬೆಳಗ್ಗೆ 8.45ಕ್ಕೆ ತಲುಪಲಿದೆ. 16572 ರೈಲು ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರ ಸಂಜೆ 6.15ಕ್ಕೆ ಬೀದರ್ನಿಂದ ಹೊರಟು ಇದೇ ಮಾರ್ಗವಾಗಿ ಮರು ದಿನ ಬೆಳಗ್ಗೆ 7.40ಕ್ಕೆ ಯಶವಂತಪುರಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.

ಈ ಸೇವೆಗೆ ಎರಡು ವಾರದೊಳಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಅಮೃತ ಹಸ್ತದಿಂದ ಚಾಲನೆ ಕೊಡಿಸುವ ಉದ್ದೇಶ ಇದೆ. ಶೀಘ್ರ ಅವರೊಂದಿಗೆ ಚಚರ್ಿಸಿ ದಿನಾಂಕ ಮತ್ತು ಸಮಯ ನಿಗದಿಪಡಿಸುವುದಾಗಿ ಹೇಳಿದ್ದಾರೆ.

ಕಲಬುರಗಿ ಮಾರ್ಗವಾಗಿ ಬೆಂಗಳೂರಿಗೆ ಓಡುವ ರೈಲಿನಿಂದ ಬೀದರ್ ಲೋಕಸಭಾ ಕ್ಷೇತ್ರದ ಜನತೆಗೆ ಬಹಳ ಅನುಕೂಲವಾಗಲಿದೆ. ಇದರೊಂದಿಗೆ ಹೊಸ ರೈಲ್ವೆ ಸೇವೆಗಳಿಗೂ ದಾರಿಮಾಡಿಕೊಡಲಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ಮಾರ್ಗವಾಗಿ ಬೀದರ್ಗೆ ಇನ್ನಷ್ಟು ರೈಲುಗಳು ಸಂಚರಿಸಲಿವೆ.
| ಭಗವಂತ ಖೂಬಾ, ಕೇಂದ್ರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net