

ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಡೆದ ವಿವಿಧ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೩೦ ಕಳ್ಳರನ್ನು ಬಂಧಿಸಲಾಗಿದ್ದು, ಬಂದಿತರಿಂದ ೫೪.೫೫ ಲಕ್ಷ ರೂ. ಮೌಲ್ಯದ ೧೦೫ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಡಾ.ಶರಣಪ್ಪ ಎಸ್.ಡಿ ತಿಳಿಸಿದರು.
ಬೈಕ್ ಕಳ್ಳತನ ಹಿನ್ನೆಲೆಯಲ್ಲಿ ವಿಶೇಷ ತಂಡ ರಚಿಸಿ, ಕಾರ್ಯಾಚರಣೆ ನಡೆಸಿದ್ದು, ೧೫೪ ಬೈಕ್ ಕಳ್ಳತನ ದಾಖಲಾಗಿದ್ದವು. ಪ್ರಸ್ತುತ ೩೮ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦೫ ಬೈಕ್ ಪತ್ತೆ ಮಾಡಲಾಗಿದೆ. ಬಂಧಿತರಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೆ ಒಳಗಾದವರಿದ್ದು, ಎಲ್ಲರೂ ಐಶಾರಾಮಿ ಜೀವನಕ್ಕಾಗಿ ಹಣ ಹೊಂದಿಸಲು ಕಳ್ಳತನಕ್ಕೆ ಇಳಿದಿದ್ದರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಟೇಷನ್ ಬಜಾರ್ ಠಾಣೆಯಿಂದ ಇಬ್ಬರನ್ನು ಬಂಧಿಸಿದ್ದು, ೨೩ ಬೈಕ್ ವಶಕ್ಕೆ ಪಡೆಯಲಾಗಿದೆ. ಸಬ್ ಅರ್ಬನ್ ಠಾಣೆಯಿಂದ ೧೦ಕಳ್ಳರನ್ನು ಬಂಧಿಸಿ, ೨೮ ಬೈಕ್, ಅಶೋಕ ನಗರ ಠಾಣೆಯಿಂದ ೨೦ ಬೈಕ್, ನಾಲ್ವರು ಕಳ್ಳರು, ಆರ್.ಜಿ.ನಗರ ಠಾಣೆಯಿಂದ ಐದು ಬೈಕ್, ಎಂಟು ಆರೋಪಿಗಳು, ಬ್ರಹ್ಮಪುರ ಠಾಣೆಯಿಂದ ೬ ಬೈಕ್, ಇಬ್ಬರು ಕಳ್ಳರು, ರೋಜಾ ಠಾಣೆಯಲ್ಲಿ ಒಂಬತ್ತು ಬೈಕ್ ಇಬ್ಬರು, ಎಂಬಿ ನಗರ ಠಾಣೆ ವ್ಯಾಪ್ತಿಯಲ್ಲಿ ೬ ಬೈಕ್ ವಶಕ್ಕೆ ಪಡೆದಿದ್ದು, ನಾಲ್ವರನ್ನು ಬಂಧಿಸಲಾಗಿದೆ. ವಿಶ್ವವಿದ್ಯಾಲಯ ಠಾಣೆಯಲ್ಲಿ ಕಳ್ಳತನ ಮಾಡಿದ ಮೂವರನ್ನು ಬಂಧಿಸಿ, ಐದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಪಿಐಗಳಾದ ಶಕೀಲ ಅಂಗಡಿ, ಅರುಣಕುಮಾರ ಇತರರಿದ್ದರು.