

ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಲೋಕಲ್ ಮತ್ತು ನಾನ್ ಲೋಕಲ್ ಕೈದಿಗಳ ಮಧ್ಯೆ ಗ್ಯಾಂಗ್‌ವಾರ್ ನಡೆದಿರುವ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ.೯ರಂದು ಜೈಲಿನಲ್ಲಿ ಕೈದಿ ಓಂಕಾರ ಸ್ವಾಮಿ ಮತ್ತು ಕೈದಿಗಳಾದ ಸಾಗರ ಬ್ಯಾಡರ್, ಸೋನು ಕಾಂಬ್ಳೆ ಮಧ್ಯೆ ಜಗಳ ನಡೆದಿದೆ. ಈ ವೇಳೆ ಶಿವಮೊಗ್ಗ, ಮಂಗಳೂರು ಕಡೆಯವರು ಬಂದು ಜಗಳ ಬಿಡಿಸಿದ್ದಾರೆ. ಇದರಿಂದ ಕುಪಿತರಾದ ಸಾಗರ, ಸೋನು ಕಾಂಬಳೆಯ ಕಡೆಯ ಅರ್ಜುನ, ನಾಗರಾಜ, ಮಹಾಂತೇಶ ಸೇರಿ ೨೦-೩೦ ಕೈದಿಗಳು (ಲೋಕಲ್) ಕೂಡಿಕೊಂಡು ಕಲ್ಲು ತೂರಾಟ ಮಾಡಲು ಆರಂಭಿಸಿದ್ದಾರೆ. ಈ ವೇಳೆ ಕೈದಿಗಳಾದ (ನಾನ್ ಲೋಕಲ್) ಬಚ್ಚನ್ ಚಾಂದ್‌ಪೀರ್, ಜುಲ್ಫಿಕರ್ ಹನೀಫ್, ಶೇಖ್ ಸದ್ದಾಂ ಹುಸೇನಿ, ಜಾಕೀರ್ ಹನೀಫ್, ಲತೀಫ್ ಹುಸೇನಿ, ಅಬ್ದುಲ್ ಸಾಧಿಕ್ ಇವರೊಂದಿಗೆ ಜಗಳ ತೆಗೆದಿದ್ದಾರೆ. ಘಟನೆ ತಿಳಿದು ಕಾರಾಗೃಹ ಸಿಬ್ಬಂದಿ ಸ್ಥಳಕ್ಕೆ ಬಂದು, ಕೈದಿಗಳನ್ನು ಚದುರಿಸಿ ಜಗಳ ನಿಯಂತ್ರಿಸಿದ್ದಾರೆ. ಘಟನೆ ವೇಳೆ ಹೆಡ್‌ವಾರ್ಡ್ರ್ ಶ್ರೀಶೈಲ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಲ್ಲು ತೂರಾಟ ಮಾಡಿದ್ದರಿಂದ ಗಾಯಗಳಾಗಿವೆ ಎಂದು ದೂರು ದಾಖಲಾಗಿದೆ.
ಕರ್ತವ್ಯಕ್ಕೆ ಅಡ್ಡಿ, ಸಿಬ್ಬಂದಿ ಗಾಯ ಮಾಡಿದ್ದರಿಂದ ಸಾಗರ ಬ್ಯಾಡರ್, ಅರ್ಜುನ, ನಾಗರಾಜ, ಸುನೀಲ, ಬಚ್ಚನ್, ಜುಲ್ಫಿಕರ್, ಶೇಕ್ ಹುಸೇನಿ, ಜಾಕೀರ್ ಹನೀಫ್, ಲತೀಫ್ ಹುಸೇನಿ, ಅಬ್ದುಲ್ ಜಿಲಾನಿ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.