ಕಲಬುರಗಿ ಜಿಲ್ಲೆಯಲ್ಲಿ ಬಣ್ಣದೋಕುಳಿ

10klb holi-2 new
Published on

ಕಲಬುರಗಿ: ಹೋಳಿ ಹಬ್ಬದ ನಿಮಿತ್ತ ನಗರದಲ್ಲಿ ಮಂಗಳವಾರ ಬಣ್ಣದಾಟದ ಉತ್ಸಾಹ ಕಂಡರೆ, ಗ್ರಾಮೀಣ ಪ್ರದೇಶದ ಬಹುತೇಕ ಕಡೆ ಕರೊನಾ ಭೀತಿಯಿಂದಾಗಿ ಸಂಭ್ರಮ ಕಾಣಲಿಲ್ಲ. ಚೀನಾ ದೇಶದಿಂದ ಬಣ್ಣ ಬರುತ್ತದೆ. ಕರೊನಾ ವೈರಸ್ ತಗಲುತ್ತದೆ ಎಂಬ ವದಂತಿಯೇ ಇದಕ್ಕೆ ಕಾರಣವಾಯಿತು.
ಸಾಮಾನ್ಯವಾಗಿ ಪ್ರತಿವರ್ಷ ಬೆಳಗ್ಗೆಯಿಂದಲೇ ಬಣ್ಣ ಎರಚಲು ಶುರು ಮಾಡುತ್ತಿದ್ದ ಹಳ್ಳಿಗಳಲ್ಲಿ 11 ಗಂಟೆ ಆದರೂ ಜನ ಮನೆಯಿಂದ ಹೊರಬಂದಿರಲಿಲ್ಲ. ಆದರೆ ನಗರ ಪ್ರದೇಶದಲ್ಲಿ ಬೆಳಗಾಗುತ್ತಲೇ ಮಕ್ಕಳು ಕೈಯಲ್ಲಿ ಪಿಚಕರಿ ಹಿಡಿದು ಎದುರು ಬಂದವರ ಮೇಲೆ ಬಣ್ಣ ಹಾಕುತ್ತ, ಬೊಬ್ಬೆ ಹೊಡೆಯುತ್ತ ರಂಗಿನಾಟ ಶುರು ಮಾಡಿದರು. ಸ್ವಲ್ಪ ಹೊತ್ತಿನ ಬಳಿಕ ಯುವ ಸಮೂಹವೂ ಬಡಾವಣೆ, ರಸ್ತೆ, ಬೀದಿಬದಿಗಳಲ್ಲಿ ಬಣ್ಣದಾಟ ಆಡುತ್ತ ಸಂಭ್ರಮಿಸಿದ ದೃಶ್ಯ ಕಾಣಿಸಿತು. ಮಹಿಳಾ ಮಣಿಗಳು ರಂಗಿನಾಟದಲ್ಲಿ ಭಾಗಿಯಾಗಿ ಖುಷಿಪಟ್ಟರು.
ರಂಗಿನಾಟದಿಂದಾಗಿ ಬಹುತೇಕ ಪ್ರಮುಖ ರಸ್ತೆಗಳು ಕಲರ್ಫುಲ್ ಕಾಣಿಸಿದವು. ಸೂಪರ್ ಮಾರ್ಕೆಟ್, ನೆಹರು ಗಂಜ್, ಗೋವಾ ಹೋಟೆಲ್ ಚೌಕ್, ಆನಂದ ಹೋಟೆಲ್, ಕಪಡಾ ಬಜಾರ್, ಸರಾಫ್ ಬಜಾರ್, ಆಳಂದ ನಾಕಾ, ಶಹಾಬಜಾರ, ಬ್ರಹ್ಮಪುರ, ನ್ಯೂ ರಾಘವೇಂದ್ರ ಕಾಲನಿ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ರಾಷ್ಟ್ರಪತಿ ಚೌಕ್, ಜೇವರ್ಗಿ ಕಾಲನಿ, ರಾಮಮಂದಿರ, ಮಹಾವೀರ ನಗರ, ಕೊಠಾರಿ ಭವನ, ಜಯತೀರ್ಥ ನಗರ ಮೊದಲಾದ ಕಡೆ ಬಣ್ಣದ ಚಿತ್ತಾರ ಕಂಡು ಬಂದಿತು.
ಕೆಲವೆಡೆ ಅಣಕು ಶವಯಾತ್ರೆ ಮಾಡಲಾಯಿತು. ಸೂಪರ್ ಮಾರ್ಕೆಟ್ನಲ್ಲಿ ಎತ್ತಿನ ಬಂಡಿಯಲ್ಲಿ ಬ್ಯಾರಲ್ಗಳಲ್ಲಿ ಬಣ್ಣ ತುಂಬಿಕೊಂಡು ಮೆರವಣಿಗೆ ಮೂಲಕ ಸಂಚಾರಿಗಳ ಮೇಲೆ ಬಣ್ಣ ಹಾಕಿ ಸಂಭ್ರಮಿಸಲಾಯಿತು.
ಇನ್ನು ಗಾಜಿಪುರ ಮತ್ತು ಶಹಾಬಜಾರಗಳಲ್ಲಿ ಮಣ್ಣಿನ ಮಡಿಕೆ ಒಡೆಯುವ ಆಟ ಗಮನ ಸೆಳೆಯಿತು. ಮಣ್ಣಿನ ಮಡಿಕೆಯಲ್ಲಿ ಬಣ್ಣ ತುಂಬಿ ಎತ್ತರದಲ್ಲಿ ಕಟ್ಟಲಾಗಿತ್ತು. ಒಬ್ಬರ ಮೇಲೊಬ್ಬರು ನಿಂತು ಅದನ್ನು ಒಡೆಯುವ ಮತ್ತು ಕೆಳಗಿನಿಂದ ಬಣ್ಣದ ನೀರು ಚಿಮ್ಮಿಸುತ್ತಿರುವ ನೋಟ ನೋಡುಗರಿಗೆ ರಂಜನೆ ಒದಗಿಸಿತು.
ಹೋಳಿ ಹಬ್ಬದ ಪ್ರಯುಕ್ತ ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲಲ್ಲಿ ತೆರೆದ ಚಿಕ್ಕ-ಪುಟ್ಟ ಹೋಟಲ್ಗಳ ಮುಂದೆ ನಿಂತು ಜನತೆ ಚಹಾ, ಕಾಫಿ, ಹಾಲು ಸೇವಿಸುತ್ತಿದ್ದರು. ಬಹುತೇಕ ಔಷಧಿ ಅಂಗಡಿಗಳು ಎಲ್ಲ ಕಡೆ ತೆರೆದಿದ್ದವು. ಗಂಜ್, ಕಿರಾಣಾ ಬಜಾರ, ಬಟ್ಟೆ ಬಜಾರ್ಗಳು ಸಂಜೆವರೆಗೆ ಮುಚ್ಚಿದ್ದವು. ವಾಹನಗಳ ಓಡಾಟದಲ್ಲೂ ವ್ಯಥ್ಯಯ ಉಂಟಾಗಿತ್ತು. ಶಾಲಾ-ಕಾಲೇಜುಗಳಿಗೆ ಬಣ್ಣದೋಕುಳಿ ನಿಮಿತ್ತ ರಜೆ ಕೊಡಲಾಗಿತ್ತು.

ಪತಂಜಲಿ ಯೋಗ ಸಾಧಕರಿಂದ ನೈಸರ್ನೈಗಿಕ ಬಣ್ಣದಾಟ
ಹೋಳಿ ಆಚರಣೆಯಲ್ಲಿ ನೈಸರ್ಗಿ ಕ ಬಣ್ಣ ಹಾಗೂ ವಿವಿಧ ತರಹದ ಹೂಗಳನ್ನು ಬಳಸಿದ್ದು ಈ ಸಲದ ವಿಶೇಷ. ರಾಮಮಂದಿರ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಆಯೋಜಿಸಿದ್ದ ಸಾತ್ವಿಕ ಹೋಳಿ ಆಚರಣೆ ಗಮನ ಸೆಳೆಯಿತು. ನೈಸರ್ಗಿಕ ಬಣ್ಣಗಳನ್ನು ಹೇಗೆ ಮಾಡಬೇಕು? ಅದರಿಂದ ಚರ್ಮದ ಮೇಲೆ ಯಾವ ರೀತಿ ನೈಸರ್ಗಿಕ ಕಾಂತಿ ಬರುತ್ತದೆ ಎಂಬ ಬಗ್ಗೆ ಬಗ್ಗೆ ಯೋಗ ಶಿಕ್ಷಕ ಉಮೇಶ ಗೋಡಬೋಲೆ ವಿವರಿಸಿದರು. ಶರಣು ಉದನೂರ, ದಾಮೋಧರ ಕುಲಕರ್ಣಿ , ರವೀಂದ್ರ
ಕುಲಕರ್ಣಿ ಜೇವರ್ಗಿ , ಜಯಶ್ರೀ ಹರವಾಳ, ಶಾಂತಾ ಪಾಟೀಲ್, ವಿಜಯಲಕ್ಷ್ಮೀ ಬಿದರಿ, ಗೌರಮ್ಮ ಪತ್ತಾರ, ಗೋದಾವರಿ ಮಾಲಿ, ಪ್ರಭಾವತಿ ಕೋಣಿನ್, ಕೃಷ್ಣಾ ರಾಠೋಡ್, ಅವಧೂತ ಜೋಶಿ ಇತರರಿದ್ದರು.

ಜನಜಾಗೃತಿ ಮೂಡಿಸಿದ
ಕರೊನಾ ಕಾಲರ್ ಟ್ಯೂನ್
ನಗರ ವಾಸಿಗಳಿಗೆ ಹೋಲಿಸಿದರೆ ಹೋಳಿಯ ಬಣ್ಣದಾಟದ ಸಂಭ್ರಮ ಹಳ್ಳಿಗಳಲ್ಲಿ ತೀರ ಕಮ್ಮಿ ಎನಿಸಿತು. ಇದಕ್ಕೆ ಪ್ರಮುಖ ಕಾರಣ ವಿಶ್ವವನ್ನು ತಲ್ಲಣಗೊಳಿಸಿದ ಕರೊನಾ ವೈರಸ್ ಹರಡುವಿಕೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಪ್ರತಿ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಗ್ರಾಹಕರು ಮಾಡುವ ಕರೆ ಕನೆಕ್ಟ್ ಆಗುವ ಮುನ್ನ ಕರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಹೇಳುವ ಕಾಲರ್ ಟ್ಯೂನ್ ನಗರಕ್ಕಿಂತ ಹಳ್ಳಿ ಜನರ ಮೇಲೆ ಪರಿಣಾಮ ಬೀರಿದಂತೆ ಕಂಡಿದೆ. ಅಂತಲೇ ಇದೊಂದ್ ವರ್ಸ್ ಬಣ್ಣ ಆಡದ್ ಭ್ಯಾಡ, ಅದ್ಯಾನೊ ಕರೊನಾ ಅಂತ ಮೊಬೈಲ್ದಾಗ್ ಹೇಳಲಕತದ್, ಸುಮ್ಸುಮ್ನೆ ಬಣ್ಣ ಆಡಿ ಎಲ್ಲಿಂದ ಬ್ಯಾನಿ ಬೀಳಣ್ಣ… ಎನ್ನುತ್ತ ಬಹುತೇಕರು ಧುಳಂಡಿಯಿಂದ ದೂರವೇ ಉಳಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net