ಕಲಬುರಗಿ ಕಾಲೇಜಿಗೆ ವೀರಾಗ್ರಣಿ

youth Fest 02
ಕಲಬುರಗಿಯಲ್ಲಿ ಏರ್ಪಡಿಸಿದ್ದ ರಾಯಚೂರು ಕೃಷಿ ವಿವಿ ಯುವಜನೋತ್ಸವದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದ ಕಲಬುರಗಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಂಭ್ರಮ
Published on

ಕಲಬುರಗಿ: ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಂತರ ಕಾಲೇಜು ಯುವಜನೋತ್ಸವದಲ್ಲಿ ಆತಿಥೇಯ ಕಲಬುರಗಿ ಕೃಷಿ ಮಹಾವಿದ್ಯಾಲಯ ಸಮಗ್ರ ವೀರಾಗ್ರಣಿ ಪಟ್ಟ ತನ್ನದಾಗಿಸಿಕೊಂಡರೆ, ರಾಯಚೂರು ಸ್ನಾತಕೋತ್ತರ ಕೇಂದ್ರ ದ್ವಿತೀಯ ಸ್ಥಾನ (ರನ್ನರ್ ಅಪ್)ಕ್ಕೆ ತೃಪ್ತಿ ಪಟ್ಟುಕೊಂಡಿತು.

ನಗರದ ಕೃಷಿ ಮಹಾವಿದ್ಯಾಲಯದಲ್ಲಿ ಎರಡು ದಿನ ನಡೆದ ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಲಬುರಗಿ ಕಾಲೇಜಿನ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿ ಸಮಗ್ರ ವೀರಾಗ್ರಣಿಗೆ ಭಾಜನರಾದರು.

ವಿವಿ ವ್ಯಾಪ್ತಿಯ ಭೀಮರಾಯನಗುಡಿ, ಗಂಗಾವತಿ, ಅಗ್ರಿಕಲ್ಚರ್ ಇಂಜಿನಿಯರಿಂಗ್ ರಾಯಚೂರು ಹಾಗೂ ಅಗ್ರಿಕಲ್ಚರ್ ಕಾಲೇಜು ರಾಯಚೂರಿನ 171 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಚಿತ್ರ ಬಿಡಿಸುವ, ಸುಗಮ ಸಂಗೀತ, ದೇಶಭಕ್ತಿ ಗೀತೆ, ಸಮೂಹ ಗಾಯನ, ವ್ಯಂಗ್ಯಚಿತ್ರ ರಚನೆ, ರಸಪ್ರಶ್ನೆ, ರಂಗೋಲಿ, ಚರ್ಚೆ, ಭಾಷಣ, ಆಶುಭಾಷಣ, ಭಿತ್ತಿಚಿತ್ರ, ಮೂಕಾಭಿನಯ, ಏಕಪಾತ್ರಾಭಿನಯ, ಪ್ರಹಸನ, ಮಣ್ಣಿನಿಂದ ಆಕೃತಿ ರಚನೆ, ಜಾನಪದ ನೃತ್ಯ ಹೀಗೆ ನಾನಾ ಸ್ಪರ್ಧೆಗಳು ನಡೆದವು.

ಆಯೋಜಕ ಡಾ.ಸುರೇಶ ಎಂ.ಪಾಟೀಲ್ ಮಾತನಾಡಿ, ಎರಡು ದಿನ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯ ಪ್ರದರ್ಶಿಸಿ ಕೃಷಿ ಕಾಲೇಜಿನ ಸಂಸ್ಕೃತಿಯನ್ನು ಬಿಂಬಿಸಿದ್ದಾರೆ. ಯುವಜನೋತ್ಸವ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಸುನೀಲ ವರ್ಮಾ ಕುಲಸಚಿವ ಎಂ.ವೀರನಗೌಡ, ಶಿಕ್ಷಣ ನಿರ್ದೇಶಕ ಡಾ.ಎಂ.ಜಿ. ಪಾಟೀಲ್, ಕೃಷಿ ತಾಂತ್ರಿಕತೆ ಡೀನ್ ಡಾ.ಎಂ. ನೇಮಿಚಂದ್ರಪ್ಪ, ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಸತ್ಯನಾರಾಯಣರಾವ್, ಡಾ.ಎಂ. ಭೀಮಣ್ಣ, ಡಾ.ಚೆನ್ನಬಸವಣ್ಣ, ಡಾ.ಎಸ್.ಬಿ. ಗೌಡಪ್ಪ, ಡಾ.ಮಸ್ತಾನರೆಡ್ಡಿ, ಡಾ.ರಾಜಶೇಖರ ಬಸನಾಯಕ ಇತರರಿದ್ದರು.

ವಿವಿಧ ಸ್ಪರ್ಧೆ ವಿಜೇತರಿಗೆ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಮಾರೋಪದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಾಂಪಿಯನ್ ಮತ್ತು ರನ್ನರ್ ಅಪ್ ಸ್ಥಾನ ಪಡೆದವರು, ವಿಜೇತರು ಸಂಭ್ರಮಾಚರಣೆ ಮೂಲಕ ಯುವಜನೋತ್ಸವಕ್ಕೆ ತೆರೆ ಬಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net