

ವಿರೇಶ ಹಾರೊಗೇರಿ ಕಲಘಟಗಿ
ನಿರೀಕ್ಷೆಯಂತೆ ಮಳೆಯಾಗಿದ್ದರಿಂದ ಹೊಲ ಹದಗೊಳಿಸಿ ಕಾಯುತ್ತಿದ್ದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕುಗೊಂಡಿವೆ.
ವಾಡಿಕೆಯಂತೆ ಮೇ ತಿಂಗಳಲ್ಲಿ ಬಿತ್ತನೆ ಪ್ರಾರಂಭವಾಗುತ್ತಿತ್ತು. ಆದರೆ, ಪ್ರಸಕ್ತ ವರ್ಷ ಉತ್ತಮ ಮಳೆ ಸುರಿದಿದ್ದರಿಂದ ಒಂದು ವಾರದಿಂದ ರೈತರು ಬಿತ್ತನೆ ಪ್ರಾರಂಭಿಸಿದ್ದಾರೆ. ಈಗಾಗಲೇ ಶೇ. 25ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ರೈತರು ಹೊಲ ಗದ್ದೆಗಳನ್ನು ಹದಗೊಳಿಸಿ ಬಿತ್ತನೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದರು. ಎತ್ತು, ಟ್ರ್ಯಾಕ್ಟರ್ಗಳ ಸಹಾಯದಿಂದ ಹೊಲ ಉಳಿಮೆ ಮಾಡಿ ಕೆರೆ ಹೂಳು, ಸಾವಯುವ ಗೊಬ್ಬರ ಹಾಕಿ ಮಳೆಗಾಗಿ ಕಾಯುತ್ತಿದ್ದರು. ವರುಣದೇವ ಕೃಪೆ ತೋರಿದ್ದರಿಂದ ಕೃಷಿ ಚಟುವಟಿಕೆ ವೇಗ ಪಡೆದುಕೊಂಡಿವೆ. ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, 11,000 ಹೆಕ್ಟೇರ್ ಭತ್ತ, 16,000 ಹೆ. ಗೋವಿನಜೋಳ, 14,061 ಹೆ. ಸೋಯಾಬೀನ್, 125 ಹೆ. ತೊಗರಿ, 700 ಹೆ. ಹತ್ತಿ, 50 ಹೆ. ಹೆಸರು, 70 ಹೆ. ಅಲಸಂದಿ ಹಾಗೂ 5,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲು ರೈತರು ಮುಂದಾಗಿದ್ದಾರೆ ಎಂಬುದು ಕೃಷಿ ಇಲಾಖೆ ಮಾಹಿತಿ.
ಮಳೆಯ ಪ್ರಮಾಣ: ವಾಡಿಕೆಯಂತೆ ತಾಲೂಕಿನಾದ್ಯಂತ ಈವರೆಗೆ 129.9 ಮಿ.ಮೀ. ಮಳೆಯಾಗಬೇಕಿತ್ತು. ಪ್ರಸ್ತುತ 182.7 ಮಿ.ಮೀ. ಮಳೆಯಾಗಿದೆ.
ಇನ್ನೂ ಬೇಕು ಮಳೆ: ತಾಲೂಕಿನಲ್ಲಿ ಕೃಷಿ ಕಾರ್ಯ ಮತ್ತಷ್ಟು ವೇಗ ಪಡೆಯಲು ಮಳೆ ಅವಶ್ಯಕತೆಯಿದೆ. ಇನ್ನೊಂದು ಉತ್ತಮ ಮಳೆಯಾದರೆ ವಾರದಲ್ಲಿ ಬಿತ್ತನೆ ಮುಗಿಯಲಿದೆ. ಸಾವಯವ ಗೊಬ್ಬರ ಬಳಸಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ರೈತ ಅಣ್ಣಯ್ಯ ಕರೇಣ್ಣವರ.
ಬಿತ್ತನೆ ಬೀಜ ವ್ಯವಸ್ಥೆ: ಕಲಘಟಗಿ, ದುಮ್ಮವಾಡ, ಮಿಶ್ರಿಕೋಟಿ, ಬೇಗೂರ, ತಬಕದಹೊನ್ನಿಹಳ್ಳಿ, ತಾವರಗೇರಿ, ಗಂಜಿಗಟ್ಟಿಯಲ್ಲಿ ಬಿತ್ತನೆ ಬೀಜ ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನಾದ್ಯಂತ ರೈತರ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ಪೂರೈಸಲು ಈಗಾಗಲೇ ಕೃಷಿ ಇಲಾಖೆ 1,327 ಟನ್ ಸೋಯಾಬೀನ್, 150 ಟನ್ ಭತ್ತ, 5.40 ಟನ್ ತೊಗರಿ, 834 ಟನ್ ಗೋವಿನಜೋಳದ ಬೀಜಗಳನ್ನು ದಾಸ್ತಾನು ಮಾಡಲಾಗಿದೆ.
ಕಲಘಟಗಿ ತಾಲೂಕಿನಾದ್ಯಂತ ಬಿತ್ತನೆ ಬೀಜ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಧಿಕೃತ ಮಾರಾಟಗಾರರ ಮುಖೇನ ರಸಗೊಬ್ಬರ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ದಾಖಲೆಗಳನ್ನು ನೀಡಿ ರೈತರು ರಸಗೊಬ್ಬರ ಪಡೆಯಬಹುದಾಗಿದೆ.| ಎಂ.ಎಫ್. ಕಟ್ಟೇಗೌಡರ, ತಾಲೂಕು ಕೃಷಿ ಸಹಾಯಕ ನಿರ್ದೇಶಕ, ಕಲಘಟಗಿ