ಕಲಂ ರದ್ದು ದಾವೆ ಅಮಾನ್ಯಕ್ಕೆ ‘ಮಹಾ’ ಪುರಾವೆ

Published on

ರವಿ ಗೋಸಾವಿ ಬೆಳಗಾವಿ: ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗಡಿ ನಿರ್ಣಯಿಸುವ 1956ರ ರಾಜ್ಯ ಮರು ವಿಂಗಡಣೆ ಕಾಯ್ದೆಯ ಹಲವು ಕಲಂಗಳನ್ನು ರದ್ದುಪಡಿಸುವಂತೆ ಸುಪ್ರಿಂಕೋರ್ಟ್ ಮೊರೆ ಹೋಗಿರುವ ಮಹಾರಾಷ್ಟ್ರ ಸರ್ಕಾರ, ಮೂರು ದಶಕಗಳ ಹಿಂದೆ ಅವೇ ಕಲಂಗಳನ್ನು ಕಾನೂನುಬದ್ಧ ಹಾಗೂ ನ್ಯಾಯಸಮ್ಮತ ಎಂದು ಒಪ್ಪಿಕೊಂಡಿತ್ತು.

ಹೌದು, ರಾಜ್ಯ ಮರು ವಿಂಗಡಣೆ ಕಾಯ್ದೆ-1956ರ ಕಲಂ 7(1)(ಬಿ)., ಕಲಂ 8.(1)(ಎ) ಮತ್ತು 8(2)ಗಳಿಗೆ ಸಂಬಂಧಿಸಿದಂತೆ 1988ರಲ್ಲಿ ಗಡಿ ಜಿಲ್ಲೆ ಬೆಳಗಾವಿಯ ಖಾನಾಪುರ ದಿವಾಣಿ ನ್ಯಾಯಾಲಯದಲ್ಲಿನ ದಾವೆಯೊಂದಕ್ಕೆ ಮಹಾರಾಷ್ಟ್ರ ಸರ್ಕಾರ ‘ರಾಜ್ಯ ಮರು ವಿಂಗಡನೆ ಕಾಯ್ದೆ ಕಾನೂನು ಬದ್ಧ ಹಾಗೂ ನ್ಯಾಯ ಸಮ್ಮತವಾಗಿದೆ’ ಎಂದು ಕೈಪಿಯತ್ ಹೊರಡಿಸಿತ್ತು. ಅದನ್ನು 1988ರ ನ.7ರಂದು ಕೊಲ್ಲಾಪುರ ಜಿಲ್ಲಾ ಸರ್ಕಾರಿ ವಕೀಲ ಎಸ್.ಜಿ.ನಾಯ್ಕ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ಕರ್ನಾಟಕದಿಂದ ಜಿಲ್ಲಾಧಿಕಾರಿ ಜಿ.ಗುರುಚರಣ್ ಹಾಗೂ ಭಾರತ ಸರ್ಕಾರದ ಅಧೀನ ಕಾರ್ಯದರ್ಶಿ ಚಂದನಸಿಂಗ್ ಮೂಲಕ ಕೈಪಿಯತ್ ಸಲ್ಲಿಸಲಾಗಿತ್ತು. ಈ ಕುರಿತ ಒಟ್ಟು 400 ಪುಟಗಳ ದಾಖಲೆಗಳು ಲಭ್ಯವಾಗಿದ್ದು, ಒಂದೆಡೆ ‘ಕಾನೂನು ಬದ್ಧ, ನ್ಯಾಯ ಸಮ್ಮತ’ ಎನ್ನುವ ಮಹಾರಾಷ್ಟ್ರ ಮತ್ತೊಂದೆಡೆ ಅವೇ ಕಲಂಗಳನ್ನು ರದ್ದುಕೋರಿ ದಾವೆ ಸಲ್ಲಿಸಿರುವುದು ಮಹಾ ಸರ್ಕಾರದಲ್ಲೇ ದ್ವಂದ್ವ ಇರುವುದನ್ನು ತೋರಿಸುತ್ತದೆ. ಅಲ್ಲದೆ, ಕರ್ನಾಟಕ ಸರ್ಕಾರದ ಕಾನೂನು ಹೋರಾಟಕ್ಕೆ ಈ ದಾಖಲೆ ಮತ್ತಷ್ಟು ಬಲ ತಂದಿದೆ.
ಈ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರೆ ಗೆಲುವು ನಿಶ್ಚಿತ ಎಂದು ಪ್ರಧಾನಮಂತ್ರಿ, ಕೇಂದ್ರ ಕಾನೂನು ಸಚಿವ, ಗೃಹಸಚಿವ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಿಗೆ ತಲುಪಿಸಲಾಗಿದ್ದು, ವಿಚಾರಣೆಗೆ ಈ ದಾಖಲೆ ಬಳಸಿಕೊಳ್ಳಬೇಕು ಎನ್ನುವುದು ಗಡಿ ನಿರ್ಣಯ ಕುರಿತ ಸಾವಿರಾರು ಸಾಕ್ಷೃ ಸಂಗ್ರಹಿಸಿರುವ ಗಡಿ ತಜ್ಞ ರವೀಂದ್ರ ತೋಟಿಗೇರ ಅವರ ಕಳಕಳಿ.

ಇಂಟರವೆನ್ಷನ್ ಅರ್ಜಿ: ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ದೆಹಲಿಯ ಕರ್ನಾಟಕ ಭವನದಲ್ಲಿ ದಾಖಲೆಗಳ ಮಹತ್ವದ ಬಗ್ಗೆ ಚರ್ಚಿಸಿ, ಅವುಗಳನ್ನು ಸುಪ್ರೀಂಕೋರ್ಟ್‌ಗೆ ನೀಡಿದರೆ ಗೆಲುವು ನಿಶ್ಚಿತ ಎಂದೂ ಅಭಿಪ್ರಾಯಪಟ್ಟಿದ್ದರು. ಅಲ್ಲದೆ, ಕರ್ನಾಟಕ ಗಡಿ ಹಾಗೂ ನದಿ ಸಂರಕ್ಷಣಾ ಆಯೋಗದಿಂದ ಮಾಹಿತಿ ಪಡೆದು ತಜ್ಞರೊಂದಿಗೆ ಚರ್ಚಿಸಿದ್ದರು. ದಾಖಲೆಗಳನ್ನು ಕಾನೂನು ಹೋರಾಟಕ್ಕೆ ಬಳಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ವಕೀಲರಾದ ನಾರಿಮನ್, ಶರದ ಜವಳಿ, ಸಂಜಯ ಹೆಗಡೆ ಅವರಿಗೆ ಕಳುಹಿಸಿದ್ದರೂ, ಸುಪ್ರೀಂಗೆ ಹಾಜರು ಪಡಿಸಿರಲಿಲ್ಲ. ಆ ಬಳಿಕ ರಾಜ್ಯದ ವಕೀಲರನ್ನು ಬದಲಾಯಿಸಿ ಶಾಮ್ ದಿವಾನ್ ಅವರಿಗೆ ವಕಾಲತು ವಹಿಸಲಾಯಿತು. ಆದರೂ, ಸುಪ್ರಿಂ ಕೋರ್ಟ್‌ಗೆ ಈವರೆಗೂ ದಾಖಲೆಗಳು ಸಲ್ಲಿಕೆಯಾಗಿಲ್ಲ. ಹೀಗಾಗಿ, ತೋಟಿಗೇರ ಅವರೇ ವೈಯಕ್ತಿಕವಾಗಿ ಅ.15 ರಂದು ಇಂಟರವೆನ್ಷನ್ ಅರ್ಜಿ ಸಲ್ಲಿಸಿದ್ದು, ಅವರ ಪರ ಆನಂದ ಸಂಜಯ ನೂಲಿ ವಕಾಲತು ವಹಿಸಿದ್ದಾರೆ.

ಅಂದು ಸಮರ್ಥನೆ: ಖಾನಾಪುರ ವಕೀಲರಾದ ಅರುಣ್ ಸರದೇಸಾಯಿ ಅವರು, ಕರ್ನಾಟಕ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಭಾರತ ಸರ್ಕಾರವನ್ನು ಪ್ರತಿವಾದಿಗಳನ್ನಾಗಿ ಮಾಡಿ, ರಾಪು ಕಾಯ್ದೆ ಕಲಂ 7(1)(ಬಿ)., ಕಲಂ 8.(1)(ಎ) ಮತ್ತು 8(2) ಕಲಂ ಗಳು ಸಂವಿಧಾನ ವಿರೋಧಿಯಾಗಿವೆ ಎಂದು ಪರಿಗಣಿಸಿ, ರದ್ದುಗೊಳಿಸುವಂತೆ ಕೋರಿ 1988ರಲ್ಲಿ ಖಾನಾಪುರ ದಿವಾಣಿ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ಆಗ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಕೈಪಿಯತ್‌ನಲ್ಲಿ ರಾಜ್ಯ ಮರು ವಿಂಗಡಣೆ ಕಾಯ್ದೆಯು ಕಾನೂನುಬದ್ಧ, ನ್ಯಾಯ ಸಮ್ಮತ, ಸಾಂವಿಧಾನಿಕವಾಗಿ ಮಾನ್ಯವಾಗಿವೆ ಎಂದು ಕಲಂಗಳನ್ನು ಸಮರ್ಥಿಸಿಕೊಂಡಿತ್ತು.

ಇಂದು ರದ್ದತಿಗೆ ದಾವೆ: 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸರ್ವೂಚ್ಚ ನ್ಯಾಯಾಲಯದಲ್ಲಿ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಗಡಿ
ದಾವೆ (ಅಸಲ್ ದಾವೆ ಸಂಖ್ಯೆ 4/2004)ದಾಖಲಿಸಿ, ರಾಪು ಕಾಯ್ದೆ, ಕಲಂ 7(1)(ಬಿ) ಮತ್ತು (ಸಿ) ಹಾಗೂ ಕಲಂ 8(1)(ಎ)ರದ್ದು ಮಾಡಲು ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net