

ಹರಪನಹಳ್ಳಿ: ಭಾರತದ ಏಕತೆಗಾಗಿ ಹೋರಾಟ ನಡೆಸುವಲ್ಲಿ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಪಾತ್ರ ಶ್ಲಾಘನೀಯವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ.ಲಕ್ಷ್ಮಣ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಜನಸಂಘದ ಸ್ಥಾಪಕ ಡಾ.ಶ್ಯಾಮಾಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ಕಲಂ 370 ಕಾನೂನು ಜಾರಿಗೆ ತರುವುದನ್ನು ಪ್ರಬಲವಾಗಿ ವಿರೋಧಿಸಿದ್ದ ಕಾರಣಕ್ಕೆ ಶ್ಯಾಮಾಪ್ರಸಾದ್ ಮುಖರ್ಜಿ ಹುತಾತ್ಮರಾದರು ಎಂದರು.
ಶ್ಯಾಮಾಪ್ರಸಾದ್ ಮುಖರ್ಜಿ ಅವರ ಅವಿರತ ಶ್ರಮದಿಂದ ಭಾರತೀಯ ಜನಸಂಘ, ಭಾರತೀಯ ಜನತಾ ಪಕ್ಷವಾಗಿ ರೂಪುಗೊಂಡು ಪ್ರಪಂಚದಲ್ಲೇ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಮುಖರ್ಜಿ ಅವರ ಕನಸಿನಂತೆ ಪ್ರಧಾನಿ ನರೇಂದ್ರ ಮೋದಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಸಮಗ್ರ ಅಭಿವೃದ್ಧಿಯತ್ತ ದಾಪುಗಾಲು ಇಡುವಂತೆ ಮಾಡಿದ್ದಾರೆ. ಶ್ಯಾಮಾಪ್ರಸಾದ್ ಮುಖರ್ಜಿ ಅವರಂಥ ಮಹಾನ್ ನಾಯಕರ ಆದರ್ಶಗಳನ್ನು ಇಂದಿನ ಪೀಳಿಗೆ ಮೈಗೂಡಿಸಿಕೊಳ್ಳಬೇಕು ಎಂದು ಕೆ.ಲಕ್ಷ್ಮಣ ತಿಳಿಸಿದರು.
ಸಾರಿಗೆ ನಿಗಮದ ಮಾಜಿ ನಿರ್ದೇಶಕ ಆರುಂಡಿ ನಾಗರಾಜ್ ಮಾತನಾಡಿ, ಶ್ಯಾಮಾಪ್ರಸಾದ್ ಮುಖರ್ಜಿ ಬಾಲ್ಯದಲ್ಲಿಯೇ ಸಂಘಟನೆಯ ಮನೋಭಾವ ಹೊಂದಿದ್ದರು. ಒಂದು ದೇಶ ಒಂದು ಸಂವಿಧಾನದ ಉದ್ದೇಶ ಹೊಂದಿದ್ದರು. ಜೈಲಿನಲ್ಲಿ ನಿಗೂಢವಾಗಿ ಮೃತಪಟ್ಟರು ಎಂದು ತಿಳಿಸಿದರು.
ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಪ್ರಧಾನಿ ಜವಾಹರ್‌ಲಾಲ್ ನೆಹರು ಆಡಳಿತವನ್ನು ಶ್ಯಾಮಾಪ್ರಸಾದ್ ಮುಖರ್ಜಿ ಬಲವಾಗಿ ವಿರೋಧಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳಿಗೆ ಪೂರಕವಾಗಿ ಹೋರಾಟ ಮಾಡಿದ್ದರು. ದೇಶದ ಸಮಗ್ರತೆ ಹಾಗೂ ತುಳಿತಕ್ಕೆ ಒಳಗಾದವರ ಪರ ಧ್ವನಿ ಎತ್ತಿದ್ದರು ಎಂದರು. ಜಿಲ್ಲಾ ಕಾರ್ಯದರ್ಶಿ ಕುಸುಮಾ ಜಗದೀಶ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸಪ್ನಾ ಮಲ್ಲಿಕಾರ್ಜುನ್, ಪ್ರಮುಖರಾದ ಬಸವರಾಜ್ ನಾಯ್ಕ, ಕಣಿವಿಹಳ್ಳಿ ಗಿರೀಶ್, ಯಡಿಹಲ್ಳಿ ಅಂಜಿನಪ್ಪ, ಕಡಕೋಲ ಬಸವರಾಜ, ವಿಜಯಕುಮಾರ ಇತರರಿದ್ದರು.