

ಚನ್ನರಾಯಪಟ್ಟಣ: ಮನುಷ್ಯ ತಾನು ಮಾಡಿರುವ ಕರ್ಮದಿಂದ ಮುಕ್ತಿ ಪಡೆಯಬೇಕೆಂದರೆ ಗೋಪೂಜೆ ಸಲ್ಲಿಸುವುದು ಅಗತ್ಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಗೋಪೂಜೆ ನೆರವೇರಿಸಿ ಆಶಿರ್ವಚನ ನೀಡಿದರು.
ಗೋವು ತನ್ನನ್ನು ಸಾಕಿದವರನ್ನೇ ನಮ್ಮವರೆಂದು ನಂಬಿರುತ್ತದೆ. ಬದುಕಿನುದ್ದಕ್ಕೂ ಲಾಭ ಪಡೆದಷ್ಟೇ ಅವುಗಳಿಗೆ ಮುಪ್ಪು ಆವರಿಸಿದ ಸಮಯದಲ್ಲಿಯೂ ಮಗುವಿನಂತೆ ಪೋಷಣೆ ಮಾಡಬೇಕು. ದೇವರಿಚ್ಚೆಯಂತೆ ಮೃತಪಟ್ಟಲ್ಲಿ ಮಾತಾ-ಪಿತೃವೆಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಗೋವಿನ ಆತ್ಮಕ್ಕೆ ಮುಕ್ತಿ ದೊರಕುವಂತೆ ಮಾಡಬೇಕು ಎಂದರು.
ಆಧುನೀಕರಣ ಮುಂದುವರಿದಂತೆಲ್ಲ ಪ್ರಚಲಿತಕ್ಕೆ ಬರುತ್ತಿರುವ ಯಂತ್ರಗಳ ಆವಿಷ್ಕಾರದ ಪರಿಣಾಮ ಕೃಷಿ ಹಾಗೂ ಇತರೆ ಚಟುವಟಿಕೆಗಳಿಗೆ ಅನುಕೂಲವಾಗುತ್ತಿದೆ. ಆದರೆ ಇದರಿಂದ ಗೋವುಗಳ ಸಂತತಿ ಹಾಗೂ ಸಂರಕ್ಷಣೆ ಕಾಯಕ ಕಡಿಮೆಯಾಗುತ್ತಿದೆ. ದಯವಿಟ್ಟು ಗೋವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಗೋಧೂಳಿ ಲಗ್ನದಲ್ಲಿ ಗೋಪೂಜೆಯೊಂದಿಗೆ ಗಂಗೆ ಪೂಜೆ, ಗಣ ಮತ್ತು ವಾಸ್ತು ಹೋಮ ಪೂರ್ಣಾಹುತಿ ಜರುಗಿದ್ದು ಶ್ರೀ ಮೆಳೆಯಮ್ಮದೇವಿ, ಶ್ರೀ ಈಶ್ವರ, ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಅಭಿ?ೇಕ, ಪುಷ್ಪಾರ್ಚನೆ, ಅಲಂಕಾರ ಹಾಗೂ ವಿಶೇ? ಪೂಜಾ ಕೈಂಕರ್ಯಗಳನ್ನು ಚುಂಚಶ್ರೀಗಳು ನೆರವೇರಿಸಿದರು.
ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಶ್ರೀಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ ಹಾಗೂ ಭಕ್ತರು ಪಾಲ್ಗೊಂಡಿದ್ದರು.