ಕರ್ಮ ನಿವಾರಣೆಗೆ ಗೋಪೂಜೆ ಅಗತ್ಯ

28 CRP 01
28 ಸಿಆರ್‌ಪಿ 01: ಚನ್ನರಾಯಪಟ್ಟಣ ತಾಲೂಕು ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಆವರಣದಲ್ಲಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೋಮವಾರ ಗೋಪೂಜೆ ನೆರವೇರಿಸಿದರು. ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಶಿವಪುತ್ರನಾಥ ಸ್ವಾಮೀಜಿ ಇದ್ದರು.
Published on

ಚನ್ನರಾಯಪಟ್ಟಣ: ಗೋಪೂಜೆ ಮಾಡುವುದರಿಂದ ಮನುಷ್ಯ ತಾನು ಮಾಡಿರುವ ಕರ್ಮದಿಂದ ಮುಕ್ತಿ ಪಡೆಯಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇಗುಲದ ಆವರಣದಲ್ಲಿ ಸೋಮವಾರ ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.

ಗೋವು ತನ್ನನ್ನು ಸಾಕಿದವರನ್ನೇ ನಮ್ಮವರೆಂದು ನಂಬಿರುತ್ತದೆ. ಬದುಕಿನುದ್ದಕ್ಕೂ ಲಾಭ ಪಡೆದಷ್ಟೇ ಅವುಗಳಿಗೆ ಮುಪ್ಪು ಆವರಿಸಿದ ಸಮಯದಲ್ಲಿಯೂ ಮಗುವಿನಂತೆ ಪೋಷಿಸಬೇಕು. ದೇವರಿಚ್ಚೆಯಂತೆ ಮೃತಪಟ್ಟಲ್ಲಿ ಮಾತಾ-ಪಿತೃವೆಂದು ಭಾವಿಸಿ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಗೋವಿನ ಆತ್ಮಕ್ಕೆ ಮುಕ್ತಿ ದೊರಕುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಆಧುನೀಕರಣದಿಂದ ಪ್ರಚಲಿತಕ್ಕೆ ಬರುತ್ತಿರುವ ಯಂತ್ರಗಳ ಆವಿಷ್ಕಾರದ ಪರಿಣಾಮ ಕೃಷಿ ಹಾಗೂ ಇತರ ಚಟುವಟಿಕೆಗಳಿಗೆ ಅನುಕೂಲವಾಗುತ್ತಿದೆ. ಆದರೆ ಇದರಿಂದ ಗೋವುಗಳ ಸಂತತಿ ಹಾಗೂ ಸಂರಕ್ಷಣೆ ಕ್ಷೀಣಿಸುತ್ತಿದೆ. ಎಲ್ಲರೂ ಗೋವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮೊದಲು ಗೋಧೂಳಿ ಲಗ್ನದಲ್ಲಿ ಗೋಪೂಜೆಯೊಂದಿಗೆ ಗಂಗೆಪೂಜೆ, ಗಣ ಮತ್ತು ವಾಸ್ತುಹೋಮ ಪೂರ್ಣಾಹುತಿ ನೆರವೇರಿತು. ಶ್ರೀ ಮೆಳೆಯಮ್ಮದೇವಿ, ಶ್ರೀ ಈಶ್ವರ, ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಸುಬ್ರಹ್ಮಣ್ಯಸ್ವಾಮಿಗೆ ಅಭಿಷೇಕ, ಪುಷ್ಪಾರ್ಚನೆ, ಅಲಂಕಾರ ಹಾಗೂ ವಿಶೇಷ ಪೂಜಾ ಕೈಂಕರ್ಯಗಳನ್ನು ಚುಂಚಶ್ರೀ ನೆರವೇರಿಸಿದರು.
ಆದಿಚುಂಚನಗಿರಿಯ ಹಾಸನ ಶಾಖಾಮಠದ ಶ್ರೀ ಶಂಭುನಾಥಸ್ವಾಮೀಜಿ, ಶ್ರೀ ಕ್ಷೇತ್ರ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net