ಕರ್ನಾಟಕವನ್ನೇ ಕಲ್ಯಾಣ ಮಾಡಿದ ನೆಲ

6KLB GUG-6
Published on

ಕಲಬುರಗಿ: ಕರ್ನಾಟಕವನ್ನೇ ಕಲ್ಯಾಣ ಮಾಡಿದ ನೆಲ ಈ ಕಲ್ಯಾಣ ಕರ್ನಾಟಕವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ. ವಸಂತಕುಮಾರ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿಶ್ವವಿದ್ಯಾಲಯ ಪ್ರಸಾರಾಂಗ ಬುಧವಾರ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನ ಮತ್ತು ಚಿನ್ನದ ಪದಕ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತ್ಯಿಕ, ಸಾಂಸ್ಕೃತಿಕ ವಲಯದ ಸಾಧಕರನ್ನು ಗುರುತಿಸಿ ಗೌರವಿಸಿ ಘನತೆ ಹೆಚ್ಚಿಸಿಕೊಳ್ಳವ ಅಗತ್ಯವಿದೆ. ಲೇಖಕನಿಗಿಂತ ಕೃತಿಯ ಬೆಲೆ ಹೆಚ್ಚು, ಅದಕ್ಕಿಂತ ಕೃತಿಯ ಬದುಕು ಮುಖ್ಯ ಎಂದು ಪ್ರತಿಪಾದಿಸಿದರು.
ಮನಸ್ಸು, ಜಾತಿ, ಬದುಕು, ಪರಂಪರೆ ಎಲ್ಲವೂ ಒಡೆದು ಹೋಗುತ್ತಿರುವ ಈ ಸಂದರ್ಭದಲ್ಲಿ ಪ್ರಶಸ್ತಿ ಪಡೆದವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು. ಸಾಂಸ್ಕೃತಿಕ ಅನನ್ಯತೆ, ಶ್ರೀಮಂತಿಕೆ, ಅಸ್ಮಿತೆ ಉಳಿಸಿಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ.ಚಂದ್ರಕಾಂತ ಯಾತನೂರ ಮಾತನಾಡಿ, ತಾವು ಕುಲಪತಿ ಆಗಿರುವ ಅವಧಿಯಲ್ಲಿ ಹಿರಿಯರಿಗೆ ಈ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ. ಈ ಸಂಭ್ರಮದ ಸಮಾರಂಭ ಬಹುದಿನಗಳ ಹಿಂದೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್ನಿಂದಾಗಿ ವಿಳಂಬವಾಗಿದೆ. ಕಲ್ಯಾಣ ಕರ್ನಾ ಟಕದಲ್ಲಿ ಓದುಗರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ. ಯುವ ಬರಹಗಾರರನ್ನು ಗುರುತಿಸುವ ಕೆಲಸ ಆಗಬೇಕು ಎಂದು ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಸಿಬ್ಬಂದಿ ಕೊರತೆ ಇದೆ. ಅದರಲ್ಲೂ ವಿಶೇಷವಾಗಿ ಶಿಕ್ಷಕರೇ ಇಲ್ಲ. ಒಂದು ವಿಭಾಗಕ್ಕೆ ಒಬ್ಬಿಬ್ಬರು ಶಿಕ್ಷಕರಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿವಿ ಮುನ್ನಡೆಸಿಕೊಂಡು ಹೋಗಬೇಕಿದೆ. ಈ ಸನ್ನಿವೇಶದಲ್ಲಿ ಪ್ರಸಾರಾಂಗ ವಿಭಾಗ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪ್ರಸಾರಾಂಗ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಸಾಹಿತಿ ಡಾ.ಹಾ.ಮಾ. ನಾಯಕ ಕುಲಪತಿಯಾಗಿದ್ದ ಅವಧಿಯಲ್ಲಿ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂಪ್ರದಾಯ ಶುರು ಮಾಡಿದರು. ಅಂದಿನಿಂದ ಈವರೆಗೆ 35 ವರ್ಷ ನಿರಂತರ ನಡೆದುಕೊಂಡು ಬಂದಿದೆ. ಇದಕ್ಕೆ ಸಕರ್ಾರದ ಅನುದಾನ ಇಲ್ಲ, ವಿವಿ ಸಂಪನ್ಮೂಲದಲ್ಲೇ ವ್ಯವಸ್ಥೆ ಮಾಡಲಾಗುತ್ತಿದೆ. ಈ ಭಾಗದ ಪ್ರತಿಭಾವಂತರನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವ ಕೆಲಸ ಆಗಬೇಕು. ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಈ ಕುರಿತು ಗಂಭೀರ ಚಿಂತನೆ ಮಾಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net