

ತುರುವೇಕೆರೆ : ಕರ್ನಾಟಕಕ್ಕೆ ಬಿಜೆಪಿ ಕೊಡುಗೆ ಏನಿದೆ ಎಂದು ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಪ್ರಶ್ನಿಸಿದರು.
ಪಟ್ಟಣದ ಬಿಜಿಎಸ್ ಸಮುದಾಯ ಭವನದಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ತಾಲೂಕು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.40 ಸರ್ಕಾರ ಎಂದು ರಾಜ್ಯದ ಗುತ್ತಿಗೆದಾರರು ದೇಶದ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೆಂದ್ರ ಮೋದಿ ಕಾಂಗ್ರೆಸ್ ಸರ್ಕಾರವನ್ನು ಶೇ.10 ಸರ್ಕಾರ ಎಂದು ಹೇಳಿದ್ದರು ಈಗ ರಾಜ್ಯದ ಜನರಿಗೆ ಪ್ರಧಾನಿ ಏನು ಉತ್ತರ ನೀಡುತ್ತಾರೆ ಎಂದರು.
ವರ್ಷದಿಂದ ಬೀದಿಯಲ್ಲಿ ರೈತರು ವಾಸ ಮಾಡಿಕೊಂಡು ಪ್ರತಿಭಟನೆ ಮಾಡುತ್ತಿದ್ದರೂ ಸ್ಪಂದಿಸದ ಪ್ರಧಾನಿ ಪಂಚರಾಜ್ಯಗಳ ಚುನಾವಣೆಗಾಗಿ ಕಾಯ್ದೆ ವಾಪಸ್ ಪಡೆದಿದ್ದಾರೆ ಅಷ್ಟೆ. ವಿಧಾನ ಪರಿಷತ್ ಅಭ್ಯರ್ಥಿ ರಾಜೇಂದ್ರ ಕಳೆದ ಬಾರಿ ಸೋಲನ್ನು ಅನುಭವಿಸಿ ಈ ಬಾರಿ ನೂರಕ್ಕೆ ನೂರರಷ್ಟು ಗೆಲವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ಕೆಲಸ ಪರ ಮಾಡಬೇಕು, ಎಲ್ಲ ಚುನಾವಣೆಗಳಲ್ಲಿಯೂ ಗೆಲವು ಸಾಧಿಸಬಹುದು ಎಂದರು.
ಕೇಂದ್ರ ಮಾಜಿ ಸಚಿವ ಮುನಿಯಪ್ಪ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿ ಸಿದ್ದರಾಮಯ್ಯ ಉತ್ತಮ ಕೆಲಸ ಮಾಡಿದ್ದಾರೆ. ಎಸ್‌ಸಿ, ಎಸ್‌ಟಿ ನಿಗಮಗಳಿಗೆ ಕೋಟಿ ಕೋಟಿ ಅನುದಾನ ನೀಡಿದ್ದರು. ಆದರೆ ಈ ಸರ್ಕಾರದಲ್ಲಿ ಅನುದಾನ ಕೊರತೆಯಾಗಿದೆ ಎಂದರು.
ಅಭ್ಯರ್ಥಿ ಆರ್.ರಾಜಣ್ಣ ಮಾತನಾಡಿ, ಮೊದಲ ಪ್ರಾಶಸ್ತದ ಮತ ನೀಡಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರಿದರು.
ಮುಖಂಡರಾದ ಗೀತಾರಾಜಣ್ಣ, ಚೌದ್ರಿರಂಗಪ್ಪ, ವಸಂತಕುಮಾರ್, ಸುಬ್ರಮಣಿ ಶ್ರೀಕಂಠೇಗೌಡ, ಪ್ರಸನ್ನಕುಮಾರ್, ನಾಗೇಶ್, ನಂಜುಂಡಪ್ಪ, ಎಂ.ಡಿ.ಮೂರ್ತಿ, ವೇಣುಗೋಪಾಲ್ ಹಾಗೂ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರು ಇದ್ದರು.
ಬೆಮೆಲ್ ಕಾಂತರಾಜು ಕಚೇರಿಗೆ ಭೇಟಿ : ಪಟ್ಟಣಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಸಂಸದರಾದ ಮುನಿಯಪ್ಪ, ಮುದ್ದಹನುಮೇಗೌಡ, ಮಾಜಿ ಜಿಲ್ಲಾಧ್ಯಕ್ಷ ಷಪಿ ಅಹಮದ್, ಅಭ್ಯರ್ಥಿ ರಾಜೇಂದ್ರ ಕಾಂಗ್ರೆಸ್ ಸಭೆಗೂ ಮುನ್ನಾ ಪಟ್ಟಣದಲ್ಲಿರುವ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಕಚೇರಿ ಭೇಟಿ ನೀಡಿ ಮಾತುಕತೆ ನಡೆಸಿದರು.