ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಮಹದೇವಸ್ವಾಮಿ ಅಧಿಕಾರ ಸ್ವೀಕಾರ

6
Published on

ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಎಲ್.ಆರ್. ಮಹದೇವಸ್ವಾಮಿ ಗುರುವಾರ ಅಧಿಕಾರ ಸ್ವೀಕರಿಸಿದರು.
ನಗರದ ಚಾಮರಾಜೇಂದ್ರ ಮೃಗಾಲಯ ಆವರಣದಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಅಧ್ಯಕ್ಷರ ಕಾರ್ಯವ್ಯಾಪ್ತಿ ಮತ್ತು ಕರ್ನಾಟಕದಲ್ಲಿರುವ 9 ಮೃಗಾಲಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್.ಆರ್.ಮಹದೇವಸ್ವಾಮಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹಾಗೂ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ನನ್ನ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದು, ಆ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದರು.
ಕರೊನಾ ಹಾವಳಿಯಿಂದಾಗಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿತವಾಗಿರುವುದರಿಂದ ರಾಜ್ಯದ ಎಲ್ಲ ಮೃಗಾಲಯಗಳು ಆರ್ಥಿಕ ಸಮಸ್ಯೆಗೆ ಸಿಲುಕಿವೆ. ಪ್ರಾಣಿ-ಪಕ್ಷಿ ಹಾಗೂ ಸಿಬ್ಬಂದಿ ಹಿತ ಕಾಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಾಣಿ-ಪಕ್ಷಿ ದತ್ತು ಪಡೆಯುವ ಯೋಜನೆಯನ್ನು ಮತ್ತಷ್ಟು ಪ್ರಚಾರ ಮಾಡಿ ಸಕಾರಾತ್ಮಕ ಫಲಿತಾಂಶಕ್ಕೆ ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ 25 ಸಾವಿರ ರೂ., ಮುಡಾ ಸದಸ್ಯೆ ಲಕ್ಷ್ಮೀದೇವಿ ಅವರ ಪುತ್ರಿಯರಾದ ಸಹನಾ ಮತ್ತು ಮೇಘನಾ ತಲಾ 5 ಸಾವಿರ ರೂ. ಪಾವತಿಸಿ ಒಂದು ವರ್ಷದ ಅವಧಿಗೆ ಮೃಗಾಲಯದ ಕೆಲವು ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net