ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ.ಮುಳೆ ಅವರಿಗೆ ತವರಿನಲ್ಲಿ ಅದ್ದೂರಿ ಸನ್ಮಾನ

Capture
Published on

ಬಸವಕಲ್ಯಾಣ: ಮರಾಠ ಸಮಾಜದ ಹಿತದೃಷ್ಟಿಯಿಂದ ಬಿಜೆಪಿ ಸೇರಿದ್ದೇನೆ. ಉಪ ಚುನಾವಣೆ ವೇಳೆ ನೀಡಿದ ಸಮಾಜದ ಎಲ್ಲ ಬೇಡಿಕೆಗಳು ಸಕರ್ಾರ ಈಡೇರಿಸಲಿದೆ ಎನ್ನುವ ಭರವಸೆ ಇದೆ ಎಂದು ಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ, ಮಾಜಿ ಶಾಸಕ ಎಂ.ಜಿ.ಮುಳೆ ವಿಶ್ವಾಸ ವ್ಯಕ್ತಪಡಿಸಿದರು.

ನಿಗಮದ ಅಧ್ಯಕ್ಷರಾಗಿ ಪ್ರಥಮ ಬಾರಿ ಭಾನುವಾರ ನಗರಕ್ಕೆ ಆಗಮಿಸಿದ ಅವರಿಗೆ ಬಿಜೆಪಿಯಿಂದ ನಾರಾಯಣಪುರ ರಸ್ತೆಯಲ್ಲಿರುವ ಪೂಜಾ ಫಂಕ್ಷನ್ ಹಾಲ್ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ಹಿತವೇ ನನಗೆ ಮುಖ್ಯ. ನನ್ನ ಜೀವನ ಸಮಾಜಕ್ಕಾಗಿ ಮುಡುಪಾಗಿಟ್ಟಿದ್ದೇನೆ. ನಿಗಮದ ಅಧ್ಯಕ್ಷನಾಗಿ ಸಮಾಜದ ವಿಕಾಸಕ್ಕೆ ಪ್ರಯತ್ನಿಸುತ್ತೇನೆ. ಯಾವುದೇ ಬಿಲ್ ಬುಕ್, ರಸೀದಿ ಪುಸ್ತಕ ಇಲ್ಲದೆ ಸ್ವಂತ ಕಾರಿನಲ್ಲಿ, ಜೇಬಿನ ದುಡ್ಡಿನಲ್ಲಿ ಪೆಟ್ರೋಲ್ ಹಾಕಿ ವಿವಿಧೆಡೆ ತಿರುಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಉಪ ಚುನಾವಣೆ ವೇಳೆ ನಾನು ಸ್ಪರ್ಧಿಸಿ ಶಾಸಕನಾದರೂ ಸಮಾಜದ ಕೆಲಸಗಳು ಆಗುತ್ತಿರಲಿಲ್ಲ. ಆಡಳಿತ ಪಕ್ಷ ಬಿಜೆಪಿ ಸೇರುವುದರಲ್ಲಿ ಸಮಾಜದ ಹಿತ ಅಡಗಿದೆ ಎಂದು ಅರಿತೇ ಬೆಂಬಲಿಸಿದೆ. ಕೊಟ್ಟ ಭರವಸೆಯಂತೆ ಮರಾಠ ನಿಗಮ ಸ್ಥಾಪಿಸಲಾಗಿದೆ. ಶಿವಾಜಿ ಪಾರ್ಕ್​ಗೆ 8 ಎಕರೆ ಸ್ಥಳ ಕಲ್ಪಿಸಲಾಗಿದೆ. ನಿಗಮಕ್ಕೆ ಮೊದಲ ಅಧ್ಯಕ್ಷರಾಗಿ ನನ್ನನ್ನು ನೇಮಿಸಲಾಗಿದೆ. ಹೊದಿಗೇರೆಯಲ್ಲಿ ಶಹಾಜಿ ಮಹಾರಾಜರ ಸಮಾಧಿ ಜೀರ್ಣೋದ್ಧಾರ ಸೇರಿದಂತೆ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದರು.

ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿ, ಮರಾಠ ಸಮಾಜದ ಹಿರಿಯ ನಾಯಕ ಮುಳೆ ಅವರಿಗೆ ನಿಗಮದ ಅಧ್ಯಕ್ಷರಾಗಿ ಮಾಡಿರುವುದರಿಂದ ರಾಜ್ಯದಲ್ಲಿ ಸಮಾಜದ ಜನರಿಗೆ ಖುಷಿ ತಂದಿದೆ. ಮಂಡಳಿಯಿಂದ ಸಮಾಜದ ವಿಕಾಸಕ್ಕಾಗಿ ಮುಳೆ ಅವರು ಯೋಜನೆಗಳನ್ನು ರೂಪಿಸಬೇಕು. ಅಗತ್ಯ ಅನುದಾನ ಸರ್ಕಾರ ಕಲ್ಪಿಸಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಅವರ ಜತೆಗಿದೆ ಎಂದು ಹೇಳಿದರು.

ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಾಧವರಾವ ಹಸೂರೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ತಾಲೂಕು ಅಧ್ಯಕ್ಷ ವಿ.ಟಿ.ಸಿಂಧೆ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ದೀಪಕ ಗಾಯಕವಾಡ, ಎಂ.ಜಿ.ರಾಜೋಳೆ ಮಾತನಾಡಿದರು. ತಾಲೂಕು ಅಧ್ಯಕ್ಷ ಅಶೋಕ ವಕಾರೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಗರ ಪ್ರಧಾನ ಕಾರ್ಯದರ್ಶಿ ಸಿದ್ದು ಬಿರಾದಾರ ನಿರೂಪಣೆ ಮಾಡಿದರು.

ಬಿಜೆಪಿ ನಗರ ಅಧ್ಯಕ್ಷ ಅರವಿಂದ ಮುತ್ತೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಮುಖಂಡರಾದ ರವಿ ಗಾಯಕವಾಡ, ಡಾ. ಸಿದ್ದು ಪಾಟೀಲ್, ರವಿ ಚಂದನಕೆರೆ, ಅನೀಲ ಭೂಸಾರೆ, ಸುಧೀರ ಕಾಡಾದಿ, ಸೂರ್ಯಕಾಂತ ಚಿಲ್ಲಾಬಟ್ಟೆ, ಶೋಭಾ ತೆಲಂಗ, ಲತಾ ಹಾರಕೂಡೆ, ಸಂಜು ಗಾಯಕವಾಡ, ಮಲ್ಲಿಕಾಜರ್ುನ ಕುಂಬಾರ, ಹಣಮಂತ ದರ್ಜೆ, ಶಂಕರ ನಾಗದೆ, ದಿಗಂಬರ ಪಾಟೀಲ್, ವಿದ್ಯಾಸಾಗರ ಪಾಟೀಲ್, ಶಿವರಾಜ ಗಂದಗೆ, ಜ್ಞಾನೇಶ್ವರ ಮುಳೆ, ಬಸವರಾಜ ಮುಸ್ತಾಪುರೆ, ಬಾಬುರಾವ ಕಾರಬಾರಿ, ಸುನೀಲ ರಾಯವಾಡೆ, ಕಾಳಿದಾಸ ಜಾಧವ್, ಕಮಲಾಕರ ಪಾಟೀಲ್ ಇತರರಿದ್ದರು.

ತ್ಯಾಗದ ಫಲವೇ ಅಧ್ಯಕ್ಷ ಸ್ಥಾನ: ಎಂ.ಜಿ.ಮುಳೆ ಅವರ ತ್ಯಾಗದ ಸೇವೆಗೆ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ ಇದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುವಲ್ಲಿ ಸಮಾಜದ ಹಿತ ಅಡಗಿದೆ ಎನ್ನುವ ಅವರ ನಿರ್ಧಾರ ಮತ್ತು ನಿಲುವು ಕೆಲವರು ಪ್ರಶ್ನಿಸಿ, ವಿರೋಧ ಸಹ ವ್ಯಕ್ತಪಡಿದ್ದರು. ಬೇಡಿಕೆ ಈಡೇರಿಸುವಲ್ಲಿ ಸಕರ್ಾರ ಕೈಗೊಂಡ ಕ್ರಮಗಳಿಂದಾಗಿ ಈಗ ಅವರಿಗೆ ಉತ್ತರ ಸಿಕ್ಕಿದೆ ಎಂದರು. ಎನ್ಸಿಪಿಯಿಂದ ನಾಮಪತ್ರ ಸಲ್ಲಿಸಿದ್ದ ಅವರು, ಶಾಸಕರೂ ಆಗಬಹುದಿತ್ತು. ಆದರೆ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಬಿಜೆಪಿ ಸಕರ್ಾರ ಮತ್ತು ಪಕ್ಷದ ನಾಯಕರು ನೀಡಿದ ಭರವಸೆಯಿಂದ ನಾಮಪತ್ರ ವಾಪಸ್ ಪಡೆದು ಬಿಜೆಪಿಗೆ ಬೆಂಬಲಿಸಿದ್ದರು. ಇದು ಮುಳೆ ಅವರ ದೊಡ್ಡ ತ್ಯಾಗ ಎಂದು ಖೂಬಾ ವಿಶ್ಲೇಷಿಸಿದರು.

ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿ: ಮರಾಠ ನಿಗಮಮಕ್ಕೆ ಮುಳೆ ಅವರನ್ನು ಅಧ್ಯಕ್ಷ ಮಾಡಿರುವುದು ಖುಷಿ ತಂದಿದೆ. ಆದರೆ ಬೇಡಿಕೆ ಇಷ್ಟಕ್ಕೆ ಮುಗಿದಿಲ್ಲ. ಅವರನ್ನು ಎಂಎಲ್ಸಿ ಮಾಡಿ, ಸಮಾಜದ ಇತರ ಬೇಡಿಕೆ ಈಡೇರಿಸಬೇಕು. ಬಸವಕಲ್ಯಾಣ ಜಿಲ್ಲಾ ಕೇಂದ್ರವನ್ನಾಗಿ ಮಾಡುವಂತೆ ಹುಲಸೂರು ತಾಲೂಕು ಮತ್ತು ಬಸವಕಲ್ಯಾಣ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಿ.ರಾಜೋಳೆ ಆಗ್ರಹಿಸಿದರು. ನಂತರ ಮಾತನಾಡಿದ ಎಂ.ಜಿ. ಮುಳೆ ಅವರು, ಉಪ ಚುನಾವಣೆ ವೇಳೆ ಪಕ್ಷದ ರಾಜ್ಯಾಧ್ಯಕ್ಷರು ಎಂಎಲ್ಸಿ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಭರವಸೆಯನ್ನು ಈಡೇರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳ್ಳಿ ಕಿರೀಟವಿಟ್ಟು ಗೌರವಿಸಿದ ಸಲಗರ: ಶಾಸಕ ಶರಣು ಸಲಗರ ನೇತೃತ್ವದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾರಂಭದಲ್ಲಿ ಎಂ.ಜಿ.ಮುಳೆ ಅವರಿಗೆ ಭವ್ಯ ಸ್ವಾಗತ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಮುಳೆ ಅವರಿಗೆ ಶಾಸಕ ಸಲಗರ ಅವರು ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು. ಉಪ ಚುನಾವಣೆಯಲ್ಲಿ ಸರ್ಕಾರ ಕೊಟ್ಟ ಭರವಸೆಯಂತೆ ನಡೆದುಕೊಳ್ಳುತ್ತಿದೆ. ಮುಳೆ ಜನರ ಮನಸ್ಸಿನಲ್ಲಿರುವ ನಾಯಕರು. ಯಾವುದೇ ಕಪ್ಪು ಚುಕ್ಕೆ ಇಲ್ಲದ, ಉತ್ತಮವಾದ ವ್ಯಕ್ತಿತ್ವ, ಅಭಿವೃದ್ಧಿಪರ ಚಿಂತನೆ ಹೊಂದಿದ್ದಾರೆ ಎಂದು ಸಲಗರ ಹೇಳಿದರು. ಸಮಾರಂಭದಲ್ಲಿ ಅನೇಕ ಪ್ರಮುಖರು, ಸಮಾಜ ಮುಖಂಡರು, ಸಂಘ-ಸಂಸ್ಥೆ ಪದಾಧಿಕಾರಿಗಳು ಮುಳೆಗೆ ಸನ್ಮಾನಿಸಿದರು. ವಿಧ ಗ್ರಾಮಗಳಿಂದ ಆಗಮಿಸಿದ ಸಮಾಜದ ಜನರು ಮತ್ತು ಅಭಿಮಾನಿಗಳು ನಾಮುಂದು-ತಾಮುಂದು ಎನ್ನುವಂತೆ ಮುಳೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಬಸವಕಲ್ಯಾಣ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಮಾಜದ ಜನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net