ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ, ನಿತ್ಯದಂತಿದ್ದ ಜನಜೀವನ

5CBP1
Published on

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು, ವಾಹನ ಮತ್ತು ಜನ ಸಂಚಾರ, ವಹಿವಾಟು ಎಂದಿನಂತೆಯೇ ನಡೆದವು.

ರಾಜ್ಯ ಸರ್ಕಾರ ಮಠಾರ ಅಭಿವೃದ್ಧಿ ನಿಗಮ ರಚಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಬಂದ್ ಜಿಲ್ಲೆಯಲ್ಲಿ ಸಾಂಕೇತಿಕ ಪ್ರತಿಭಟನೆಗೆ ಸೀಮಿತವಾಯಿತು. ಬಹುತೇಕ ಸಂಘಟನೆಗಳು ಪ್ರತಿಭಟನೆ ನಡೆಸಿ ಸ್ಥಳೀಯ ಆಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ನೀರಾವರಿ ಹೋರಾಟ, ಸರ್ಕಾರಗಳ ಧೋರಣೆ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ನಡೆಸುತ್ತಿದ್ದ ಬಂದ್ ವೇಳೆ ಸ್ವಯಂ ಪ್ರೇರಿತರಾಗಿ ಜನರೇ ವಹಿವಾಟು ಸ್ಥಗಿತಗೊಳಿಸಿ ಸಹಕಾರ ನೀಡುತ್ತಿದ್ದರು. ಆದರೆ, ಈ ಬಾರಿ ಯಾವುದೇ ಸಂಘಟನೆಗಳು ಬಂದ್‌ಗೆ ಸಹಕಾರ ಕೋರುವ ರ‌್ಯಾಲಿ, ಮೆರವಣಿಗೆ ಕೈಗೊಳ್ಳಲಿಲ್ಲ. ಬಂದ್‌ನ ಯಶಸ್ವಿ ಘೋಷಣೆಗೆ ಮಾತ್ರ ಸೀಮಿತರಾದರೆ, ವಿವಿಧ ಬಣಗಳ ಮುಖಂಡರು ಸಾಂಕೇತಿಕ ಪ್ರತಿಭಟನೆ, ನೈತಿಕ ಬೆಂಬಲ ನೀಡಿದರು.

ಜಿಲ್ಲೆಯಲ್ಲಿ ಬೆಳಗ್ಗಿಯಿಂದಲೇ ಸಾರಿಗೆ ಮತ್ತು ಖಾಸಗಿ ವಾಹನಗಳು ಸಂಚರಿಸಿದವು. ಅಂಗಡಿ, ಹೋಟೆಲ್ ಮಾಲೀಕರು ಎಂದಿನಂತೆ ವ್ಯಾಪಾರ ನಡೆಸಿದರು. ಸರ್ಕಾರಿ ಮತ್ತು ಖಾಸಗಿ ಕಚೇರಿ, ಪೆಟ್ರೋಲ್ ಬಂಕ್, ಸಿನಿಮಾ ಮಂದಿರಗಳು ಯಾವುದೇ ಅಡಚಣೆಯಿಲ್ಲದೇ ಕಾರ್ಯನಿರ್ವಹಿಸಿದವು. ಬುರೇವಿ ಚಂಡಮಾರುತದ ಪ್ರಭಾವದಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿ ಜಡಿ ಮಳೆ ಜತೆಗೆ ಮೈ ಕೊರೆಯುವ ಚಳಿಯಿಂದಾಗಿ ಹೆಚ್ಚಿನ ಜನರು ಹೊರಗೆ ಬರಲಿಲ್ಲಷ್ಟೇ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ಕೇಂದ್ರದಲ್ಲಿನ ಶಿಡ್ಲಘಟ್ಟ ವೃತ್ತ, ಬಲಮುರಿ ವೃತ್ತ, ಜಿಲ್ಲಾಡಳಿತ ಭವನದ ಎದುರು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಸಶಸ ಮೀಸಲು ಪಡೆಯನ್ನು ನಿಯೋಜಿಸಿದ್ದರ ಜತೆಗೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿದರು. ಬಲವಂತದ ಬಂದ್ ನಡೆಸದಂತೆ ಜಿಲ್ಲಾ ಪೊಲೀಸ್ ಇಲಾಖೆ ಮೊದಲೇ ಹೋರಾಟಗಾರರಿಗೆ ಎಚ್ಚರಿಕೆ ನೀಡಿತ್ತು. ಅಲ್ಲಲ್ಲಿ ಸಾಂಕೇತಿಕವಾಗಿ ಪ್ರತಿಭಟನೆಗಳನ್ನು ನಡೆಸಿ, ತಾಲೂಕು ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net