ಕರ್ನಾಟಕ ಬಂದ್​ಗೆ ರೈತ ಸಂಘ ಬೆಂಬಲ

24 smg Veeresh
Published on

ಶಿವಮೊಗ್ಗ: ರೈತ ವಿರೋಧಿ ನೀತಿ ಖಂಡಿಸಿ ಸೆ.28ರಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಜಿಲ್ಲೆಯಲ್ಲಿ ರೈತ ಸಂಘ ಹಾಗೂ ಹಸಿರುಸೇನೆ ಬೆಂಬಲ ಸೂಚಿಸಿದೆ.

ರಾಜ್ಯವ್ಯಾಪಿ ಹೋರಾಟಕ್ಕೆ ನಮ್ಮ ಸಂಘಟನೆ ಈಗಾಗಲೇ ಬೆಂಬಲ ಸೂಚಿಸಿದ್ದು, ಜಿಲ್ಲೆಯಲ್ಲಿ ನಡೆಯುವ ಪ್ರತಿಭಟನೆ ಹಾಗೂ ಬಂದ್​ಗೆ ವಿವಿಧ ಸಂಘಟನೆಗಳ ಬೆಂಬಲ ಕೋರಲಾಗಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ.ವೀರೇಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹೊಸ ಕಾಯ್ದೆಯಿಂದ ರೈತರಿಗೆ ಸಂಕಷ್ಟ ಎದುರಾಗುತ್ತದೆ. ಕೃಷಿ ಭೂಮಿ ಬಂಡವಾಳಶಾಹಿಗಳ ಪಾಲಾಗುತ್ತದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕಾಯ್ದೆ ಜಾರಿಗೂ ಮುನ್ನ ಸಾರ್ವಜನಿಕವಾಗಿ ಸಮರ್ಪಕ ಚರ್ಚೆ ನಡೆಸಬೇಕಿತ್ತು ಎಂದು ಹೇಳಿದರು.

ಸೆ.28ರ ಕರ್ನಾಟಕ ಬಂದ್​ಗೆ ಆಟೋ ಹಾಗೂ ಟ್ಯಾಕ್ಸಿ ಚಾಲಕರ ಸಂಘ, ಕನ್ನಡಪರ ಸಂಘಟನೆಗಳು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸೇರಿದಂತೆ ಹಲವು ಸಂಘಟನೆ ಹಾಗೂ ಸಂಸ್ಥೆಗಳ ಬೆಂಬಲ ಕೋರಿ ಪತ್ರ ಬರೆಯಲಾಗಿದೆ. ಅಂದು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ನೂತನ ಕಾಯ್ದೆಗಳಿಗೆ ನಮ್ಮ ವಿರೋಧ ದಾಖಲಿಸಲಿದ್ದೇವೆ ಎಂದರು.

ರೈತ ಸಂಘದ ಶಿವಮೊಗ್ಗ ತಾಲೂಕು ಅಧ್ಯಕ್ಷ ಜಿ.ಆರ್.ಸಣ್ಣರಂಗಪ್ಪ, ಉಪಾಧ್ಯಕ್ಷ ಜಗದೀಶ ನಾಯ್್ಕ ಪ್ರಧಾನ ಕಾರ್ಯದರ್ಶಿ ಪಾಂಡುರಂಗಪ್ಪ, ಹಸಿರುಸೇನೆ ತಾಲೂಕು ಅಧ್ಯಕ್ಷ ಹಾಲೇಶ್, ಪ್ರಮುಖರಾದ ಪರಮೇಶ್ವರಪ್ಪ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net