

ಯಾದಗಿರಿ: ಕಾವೇರಿ ಕಣಿವೆ ಬರಿದಾಗಿದ್ದರೂ ತಮಿಳುನಾಡಿಗೆ ನೀರು ಹರಿಸುವಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾದ್ದರಿಂದ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ ಎಂದಿನಂತೆ ಜಿಲ್ಲೆಯ ನಗರದ ಹಾಗೂ ಪಟ್ಟಣ ಪ್ರದೇಶದಲ್ಲಿ ಅಂಗಡಿ, ಮುಗ್ಗಟ್ಟುಗಳ ಬಾಗಿಲು ತೆಗೆದು ವ್ಯಾಪಾರದಲ್ಲಿ ತೊಡಗಿದ್ದವು. ಸಾರಿಗೆ ಸಂಸ್ಥೆ ಮತ್ತು ಖಾಸಗಿ ವಾಹನಗಳ ಸಂಚಾರದಲ್ಲಿ ಯಾವುದೇ ವ್ಯತ್ಯೆಯ ಕಂಡು ಬರಲಿಲ್ಲ. ನಗರದ ಜನನಿಬಿಡ ಪ್ರದೇಶಗಳಾದ ಗಾಂಧಿವೃತ್ತ, ಸುಭಾಶ್ಚಂದ್ರ ವೃತ್ತ,
ಬಸವೇಶ್ವರ ಗಂಜ್ ಸರ್ಕಲ್, ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಜೋರಾಗಿತ್ತು.
ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿಸಲು ಪೊಲೀಸರು ಅವಕಾಶ ಕೊಡಲಿಲ್ಲ. ಇತ್ತ ಸಕರ್ಾರಿ ಕಚೇರಿಗಳು ಶಾಲಾ, ಕಾಲೇಜುಗಳು ಸಹ ಎಂದಿನಂತೆ ಪಾಠ ಬೋಧನೆಯಲ್ಲಿ ತೊಡಗಿಕೊಂಡಿದ್ದವು. ಮುನ್ನೆಚ್ಚರಿಕೆ ಕ್ರಮವಾಗಿ ಸಾರಿಗೆ ಸಂಸ್ಥೆ ಬಸ್ಗಳು ಬೆಳಗ್ಗೆ ಒಂದೆರಡು ಗಂಟೆಗಳ ಕಾಲ ವಿಳಂಬವಾಗಿ ಬಸ್ನಿಲ್ದಾಣದಿಂದ ಬೇರೆ ಬೇರೆ ಕಡೆಗಳಿಗೆ ಕಾರ್ಯಾಚರಣೆ ಆರಂಭಿಸಿದವು.
ಇತ್ತ ಜಿಲ್ಲೆಯ ಶಹಾಪುರ, ಸುರಪುರ, ಹುಣಸಗಿ ಮತ್ತು ಗುರುಮಠಕಲ್ ಪಟ್ಟಣದಲ್ಲೂ ಸಹ ಬಂದ್ಗೆ ಪ್ರತಿಕ್ರಿಯೆ ಬರಲಿಲ್ಲ. ಗ್ರಾಮೀಣ ಭಾಗದ ಜನತೆ ತಮ್ಮ ಕಚೇರಿ ಕೆಲಸ ಮತ್ತು ವ್ಯಾಪಾರಕ್ಕಾಗಿ ಆಗಮಿಸಿದ್ದರು, ಶುಕ್ರವಾರ ಇದ್ದ ಕಾರಣ ಅಲ್ಲಲ್ಲಿ ವಾರದ ಸಂತೆಗಳ ಭರಾಟೆ ಹೆಚ್ಚಾಗಿ ಕಂಡು ಬಂದಿತು.
ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿತ್ತು.