

ಮೈಸೂರು: ಬೆಂಗಳೂರಿನಲ್ಲಿ ನಡೆಯುವ ವಿಶ್ವ ಹೂಡಿಕೆದಾರರ ಸಮಾವೇಶ ವಿರೋಧಿಸಿ ಹಾಗೂ ಬಡವರ ಬಗರ್ ಹುಕುಂ ಭೂಮಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್)ದಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ರೈತರ ನೆರವಿಗೆ ಧಾವಿಸದ ಸರ್ಕಾರ, ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ನಡೆಸುವ ಮೂಲಕ ರೈತ ಹಾಗೂ ಜನ ವಿರೋಧಿಯಾಗಿದೆ. ಬೆಲೆ ಏರಿಕೆ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವಿಗೆ ನಿಲ್ಲಬೇಕಾದ ಸರ್ಕಾರ ರೈತರನ್ನೇ ಮರೆತಂತ್ತಿದೆ. ಕೈಗಾರಿಕೆ ಅಭಿವೃದ್ಧಿ ನೆಪದಲ್ಲಿ ಭೂಮಿ ಕಸಿದುಕೊಳ್ಳಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಸರ್ಕಾರ ಕೂಡಲೇ ರೈತರ ಬೇಡಿಕೆ ಈಡೇರಿಸಬೇಕು, ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ರದ್ದುಪಡಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ-2022 ಅನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ಆಗ್ರಹಿಸಬೇಕು. ಅತಿವೃಷ್ಟಿಗೆ ಮನೆ-ಬೆಳೆ ಕಳೆದುಕೊಂಡ ರೈತ-ಕೂಲಿಕಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ರೈತರ ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿಯನ್ನು ಸಕ್ರಮ ಮಾಡಬೇಕು, ರೈತರ-ದಲಿತರ ಬಗರ್ ಹುಕುಂ ಭೂಮಿಯನ್ನು ಮಠ-ಮಂದಿರ-ಟ್ರಸ್ಟ್ ಹಾಗೂ ರಿಯಲ್ ಎಸ್ಟೇಟ್ ಕಬಳಿಕೆಯಿಂದ ರಕ್ಷಿಸಬೇಕು ಎಂದು ಆಗ್ರಹಿಸಿದರು.
ಈಗ ಆಗಿರುವ ಕಾನೂನು ಬಾಹಿರ ಕಬಳಿಕೆಯಿಂದ ಭೂಮಿ ವಾಪಸ್ ಪಡೆದು ಮತ್ತೆ ಸ್ವಾಧೀನದಲ್ಲಿದ್ದ ರೈತರಿಗೆ ಹಂಚಬೇಕು. ಬಲವಂತದ ಭೂ ಸ್ವಾಧೀನ ನಿಲ್ಲಿಸಬೇಕು. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ, ಬ್ಯಾಂಕ್ ಸಾಲ ನೀಡಲು ಕ್ರಮ ತೆಗೆದುಕೊಳ್ಳಬೇಕು. ಹೆಚ್ಚುತ್ತಿರುವ ಮಹಿಳೆಯರ-ಮಕ್ಕಳು ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಿ ಸೂಕ್ತ ರಕ್ಷಣೆ ವ್ಯವಸ್ಥೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಹಾಗೂ ಮನೆ-ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ತಮ್ಮ ನೇತೃತ್ವದಲ್ಲಿ ಬಗರ್ ಹುಕುಂ ಸಾಗುವಳಿದಾರರರ ಸಭೆ ಕರೆಯಬೇಕೆಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಕಮಲಾಬಾಯಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಚಿಕ್ಕಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಜಗದೀಶ್ ಸೂರ್ಯ, ಉಪಾಧ್ಯಕ್ಷ ಕೆ.ಬಸವರಾಜ್, ಮುಖಂಡರಾದ ಚಂದ್ರಶೇಖರ್, ಸಿದ್ದಯ್ಯ, ಕನಕನಾಯಕ, ಮೂರ್ತಿ, ಮಹದೇವಸ್ವಾಮಿ, ಮಹೇಶ್, ಬಾಲರಾಜ್, ಚಾಮುಂಡಮ್ಮ, ಸೋಮಶೇಖರ್ ಗುಂಚಳ್ಳಿ, ಕೆಂಪಮ್ಮ, ಅಭಿಮಾನ್, ಜವರೇಗೌಡ ಇತರರು ಇದ್ದರು.