ಕರ್ನಾಟಕ ಪಬ್ಲಿಕ್ ಶಾಲೆಗೆ ಹೆಚ್ಚುವರಿ ಕೊಠಡಿಗಳ ಭಾಗ್ಯ

09 HANUR 1
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಸರ್ಕಾರೇತರ ಸಂಸ್ಥೆ ಒ ಸ್ಯಾಟ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಬೆಂಗಳೂರು ವತಿಯಿಂದ ಶುಕ್ರವಾರ ಶೈಕ್ಷಣಿಕ ವಲಯದ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ 4 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದ್ದು, ಮಕ್ಕಳ ಶಿಕ್ಷಣಕ್ಕೆ ವರದಾನವಾಗಿದೆ.

ಶತಮಾನವನ್ನು ಪೂರೈಸಿದ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಗೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಪ್ರಸ್ತುತ 272 ವಿದ್ಯಾರ್ಥಿಗಳು ಅದರಲ್ಲಿ ಬಡಕುಟುಂಬಕ್ಕೆ ಸೇರಿದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿನ ಪ್ರಭಾರ ಮುಖ್ಯ ಶಿಕ್ಷಕ ಮಾದೇಶ್ ಹಾಗೂ ಶಿಕ್ಷಕರು ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಸರ್ಕಾರದಿಂದ ಮಕ್ಕಳಿಗೆ ದೊರಕಬೇಕಾದ ಸವಲತ್ತು ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ.

ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಎಸ್‌ಡಿಎಂಸಿ ಸಮಿತಿ ಹೆಚ್ಚಿನ ಆಸಕ್ತಿ ವಹಿಸಿದ್ದು, ಸಂಪೂರ್ಣ ಸಹಕಾರ ನೀಡುತ್ತಿದೆ. ಶಾಲಾ ವಾತಾವರಣ ಶಿಸ್ತುಪಾಲನೆಗೆ ಪೂರಕವಾಗಿದೆ. ಆದರೆ ತರಗತಿ ಕೊಠಡಿ ಕೊರತೆ ಇತ್ತು. ಇದರಿಂದ ಮಕ್ಕಳ ಶಿಕ್ಷಣಕ್ಕೆ ಕೊಂಚ ತೊಡಕಾಗಿ ಪರಿಣಮಿಸಿತ್ತು. ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಶಿಕ್ಷಣಾಧಿಕಾರಿ ಅವರಲ್ಲಿ ಮನವಿ ಮಾಡಿದಾಗ, ಒ ಸ್ಯಾಟ್ ಸಂಸ್ಥೆಯ ಗಮನಕ್ಕೆ ತರಲಾಗಿತ್ತು.ಒ ಸ್ಯಾಟ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ತಂಡ ಕಳೆದ ಹಲವು ತಿಂಗಳ ಹಿಂದೆ ಶಾಲೆಗೆ ಆಗಮಿಸಿ ಶಿಕ್ಷಕರಿಂದ ಮಾಹಿತಿ ಪಡೆದು ಕೊಠಡಿ ಸಮಸ್ಯೆ ಸಂಬಂಧ ಪರಿಶೀಲನೆ ನಡೆಸಿದ್ದರು. ಇದರ ಪರಿಣಾಮ ಇದೀಗ 60 ಲಕ್ಷ ರೂ. ವೆಚ್ಚದಲ್ಲಿ 4 ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಕಲಿಕಾ, ಬೋಧನಾ ಪ್ರಕ್ರಿಯೆಗೆ ಸಹಕಾರಿಯಾಗಿದೆ. ಮಕ್ಕಳು ಹಾಗೂ ಶಿಕ್ಷಕರಿಗೆ ಅನುಕೂಲವಾಗಲಿದೆ.

ಶಿಕ್ಷಣಕ್ಕೆ ವರದಾನ: ಒ ಸ್ಯಾಟ್ ಸಂಸ್ಥೆಯು ದೇಶದಲ್ಲಿ ಗ್ರಾಮೀಣ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯವನ್ನು ಒದಗಿಸುವ ಸಲುವಾಗಿ 2003ರಲ್ಲಿ ಅಮೆರಿಕದಲ್ಲಿ ಹಾಗೂ 2013ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. ಒಂದು ಸಲಕ್ಕೆ ಒಂದು ಶಾಲೆ ಎಂಬ ಧ್ಯೇಯದೊಂದಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಿಕೆ, ವಿದ್ಯಾರ್ಥಿಗಳು, ಶಿಕ್ಷಕರಿಗೆ ಆಧುನಿಕ ಕಲಿಕಾ ಸಾಧನಗಳನ್ನು ಒದಗಿಸುವುದರ ಮೂಲಕ ಫಲಿತಾಂಶ ಸುಧಾರಣೆಯೊಂದಿಗೆ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಈ ಸಂಸ್ಥೆಯ ಮುಖ್ಯ ಉದ್ಧೇಶವಾಗಿದೆ. ಭಾರತ ಹಾಗೂ ಅಮೆರಿಕ ದಾನಿಗಳ ಮೂಲಕ ದೇಣಿಗೆಯನ್ನು ಸಂಗ್ರಹಿಸುತ್ತಿದೆ. ಈವರೆಗೂ 118 ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸುವ ಯೋಜನೆಯನ್ನು ಆರಂಭಿಸಿದ್ದು, 105 ಶಾಲೆಗಳಲ್ಲಿ ಪೂರ್ಣಗೊಳಿಸಲಾಗಿದೆ. ಆದ್ದರಿಂದ ಈ ಸಂಸ್ಥೆಯು ಶಿಕ್ಷಣಕ್ಕೆ ವರದಾನವಾಗಿದ್ದು, ಮಕ್ಕಳಿಗೆ ಆಶಾಕಿರಣವಾಗಿದೆ.

ಮೆಚ್ಚುಗೆ ವ್ಯಕ್ತ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಒ ಸ್ಯಾಟ್ ಸಂಸ್ಥೆ ಲಕ್ಷಾಂತರ ರೂ. ವೆಚ್ಚದಲ್ಲಿ 4 ಕೊಠಡಿಗಳನ್ನು ನಿರ್ಮಿಸುತ್ತಿದೆ. ಸಂಸ್ಥೆಯ ಕಾಳಜಿಯ ಬಗ್ಗೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸಮಿತಿ, ಪಾಲಕರು ಹಾಗೂ ಗ್ರಾಮಸ್ಥರಿಂದ ತೀವ್ರ ಮೆಚ್ಚುಗೆವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ದಾನಿಗಳಾದ ರವಿಕಿರಣ್, ವಸಂತಾ ನಾಗರಾಜು, ಒ ಸ್ಯಾಟ್ ಸಂಸ್ಥೆ ನಿರ್ದೇಶಕರಾದ ಬಾಲಕೃಷ್ಣರಾವ್, ಗೋಪಾಲಕೃಷ್ಣ ಭಟ್, ಸೀತೇಶ್ ಭಾರತಿ, ರಮಾ ವಿವೇಕ್, ಗ್ರಾಪಂ ಅಧ್ಯಕ್ಷೆ ಮಂಗಳಾ ರಂಗಸ್ವಾಮಿ, ಪ್ರಭಾರ ಮುಖ್ಯಶಿಕ್ಷಕ ಮಾದೇಶ್, ದೈಹಿಕ ಶಿಕ್ಷಣ ಶಿಕ್ಷಕ ಲೋಕೇಶ್, ಶಿಕ್ಷಕರಾದ ತಾರಾ, ಮೌನಾ, ಸಾವಿತ್ರಿ, ಚಿನ್ನಮುತ್ತಮ್ಮ, ಉಷಾರಾಣಿ ಇನ್ನಿತರರು ಇದ್ದರು.

ಶಾಲೆಯಲ್ಲಿ ಕೊಠಡಿಗಳ ಕೊರತೆ ಇತ್ತು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಒ ಸ್ಯಾಟ್ ಸಂಸ್ಥೆ ನಮ್ಮ ಶಾಲೆಯನ್ನು ಗುರುತಿಸಿ 60 ಲಕ್ಷ ರೂ. ವೆಚ್ಚದಲ್ಲಿ 4 ಕೊಠಡಿಗಳನ್ನು ನಿರ್ಮಿಸುತ್ತಿರುವುದು ಮೆಚ್ಚುಗೆಯ ಸಂಗತಿ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ. ಹಾಗಾಗಿ ಶಾಲಾ ಆಡಳಿತ ಮಂಡಳಿ ಪರವಾಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇವೆ. ಮಾದೇಶ್, ಪ್ರಭಾರ ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net