ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಪ್ರತಿಭಟನೆ

ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಪ್ರತಿಭಟನೆ
Published on

ಹಾಸನ: ಕರ್ನಾಟಕ ಸರ್ಕಾರ ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ 1997ಕ್ಕೆ ಮಾಡಿರುವ ತಿದ್ದುಪಡಿಯಲ್ಲಿ ಹಲವಾರು ದೋಷಗಳು ಇದ್ದು, ಅವುಗಳು ದೇವಸ್ಥಾನಗಳ ಪರಂಪರೆಯ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಹಾಗಾಗಿ ಈ ತಿದ್ದುಪಡಿ ರದ್ದು ಮಾಡಬೇಕೆಂದು ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಬಳಿಕ ಮಹಾಸಂಘದ ಅಧ್ಯಕ್ಷ ಗೋವಿಂದರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಕಲಂ 69 ಇ ನಲ್ಲಿ ಜಿಲ್ಲಾ ಮಟ್ಟದ ಮತ್ತು ರಾಜ್ಯ ಮಟ್ಟದ ಉನ್ನತ ಸಮಿತಿಗಳನ್ನು ರಚನೆ ಮಾಡಲಾಗಿದ್ದು, ಜಿಲ್ಲಾ ಮಟ್ಟದ ಸಮಿತಿಗೆ 9 ಜನರ ಸದಸ್ಯರ ನೇಮಕಾತಿಯ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ 9 ಜನರಲ್ಲಿ ಪದನಿಮಿತ್ತ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಅರಣ್ಯ ಸಂರಕ್ಷಣಾ ಅಧಿಕಾರಿ, ಜಪಂ ಸಿಇಒ, ಲೋಕೊಪಯೋಗಿ ಅಭಿಯಂತರ ಹೀಗೆ 9 ಜನರ ಸಮಿತಿ ರಚನೆ ಮಾಡಲಾಗಿದೆ. ಇದೇ ರೀತಿಯಲ್ಲಿ 16 ಜನರ ರಾಜ್ಯ ಮಟ್ಟದ ಸಮಿತಿಯನ್ನು ರಚನೆ ಮಾಡಲಾಗಿದ್ದು, ಅದರಲ್ಲಿ ಸ್ಥಳೀಯ ಶಾಸಕರು, ಸಂಸದರು ಸೇರಿ ವಿವಿಧ ಇಲಾಖೆಗಳ ಕಾರ್ಯದರ್ಶಿಗಳನ್ನು ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಇದರಲ್ಲಿ ಹಿಂದೂಗಳಲ್ಲದವರು ಇರುವ ಸಾಧ್ಯತೆ ಇರುವ ಕಾರಣದಿಂದ ಇದು ಅತ್ಯಂತ ಅಪಾಯಕಾರಿಯಾಗಿದೆ ಎಂದರು.
ಕಲಂ 25 ರಲ್ಲಿ ಸಂಯೋಜಿತ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ರಚನೆ ಸಂದರ್ಭದಲ್ಲಿ ಹಿಂದೂಗಳಲ್ಲದವರನ್ನು ನೇಮಕ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ರಕ್ಷಣೆಯ ವಿಷಯದಲ್ಲಿ ಅತ್ಯಂತ ಅಪಾಯಕಾರಿಯಾಗಿದೆ. ಕಲಂ 17 ರಲ್ಲಿ ಯಾವ ಸಂಸ್ಥೆಗಳ ಆದಾಯ 1 ಕೋಟಿ ರೂ. ಮೀರಿರುವುದೋ ಅವುಗಳ ಶೇ.10 ನಿವ್ವಳ ಆದಾಯದ ಹಣವನ್ನು ಹಾಗೂ 5 ರಿಂದ 10 ಲಕ್ಷ ಆದಾಯ ಇರುವ ದೇವಸ್ಥಾನಗಳ ಶೇ. 5 ಹಣವನ್ನು ಸಾಮಾನ್ಯ ಸಂಗ್ರಹಣ ನಿಧಿಗೆ ವರ್ಗಾವಣೆ ಮಾಡುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ದೇವಸ್ಥಾನಗಳ ಹಣವನ್ನು ದೋಚುವ ಹುನ್ನಾರವಾಗಿದೆ. ಈ ಎಲ್ಲ ಕಲಂಗಳು ದೇವಸ್ಥಾನಗಳ ಸಂರಕ್ಷಣೆ ದೃಷ್ಟಿಯಿಂದ ಅತ್ಯಂತ ಮಾರಕವಿರುವುದರಿಂದ ಇದಕ್ಕೆ ಅವಕಾಶ ನೀಡಬಾರದು ಎಂದು ವಿನಂತಿಸುವುದಾಗಿ ಕೇಳಿಕೊಂಡರು.
ಪ್ರಸ್ತುತ ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ದೇವಸ್ಥಾನಗಳ ಜಮೀನುಗಳು ಖಾಸಗಿಯವರಿಂದ ಒತ್ತುವರಿಯಾಗಿದೆ. ದೇವಸ್ಥಾನಗಳ ಜಮೀನು ರಕ್ಷಣೆ ಮಾಡಲು ಸುಪ್ರೀಂಕೋರ್ಟ್ ಅದೇಶ ನೀಡಿದ ನಂತರವು ಸಹ ಇದುವರೆಗೆ ದೇವಸ್ಥಾನಗಳ ಜಮೀನುಗಳ ಸರ್ವೆ ಮಾಡಿ, ಒತ್ತುವರಿ ತೆರವು ಮಾಡಿ ಜಮೀನುಗಳ ರಕ್ಷಣೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರವು ದತ್ತಿ ಇಲಾಖೆಯ ದೇವಸ್ಥಾನಗಳ ಜಮೀನುಗಳನ್ನು ಸಂರಕ್ಷಣೆ ಮಾಡಬೇಕೆಂದು ಆಗ್ರಹ ಮಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಮಹಾಸಂಘದ ಪದಾಧಿಕಾರಿಗಳಾದ ರಾಘವಾಚಾರ್, ರಾಜವೆಂಕಟೇಶ್, ಪುಟ್ಟಸ್ವಾಮಿ, ಸೋಮಶೇಖರ್, ಸತೀಶ್, ಸುಜಾತಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net